ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನ ಮಾಡಲು ನಡೆದ ಆಪರೇಷನ್ ಕಮಲದಲ್ಲಿ ಹಲವು ಬಿಜೆಪಿ ನಾಯಕರ ಕೈವಾಡವಿದೆ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಂಗಳವಾರ ಚಿಕ್ಕಬಳ್ಳಾಪುರ ವಿಧಾನಸಭೆ ಉಪಚುನಾವಣೆ ಪ್ರಚಾರ ಸಂದರ್ಭ ಮಂಚೇನಹಳ್ಳಿಯಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಭಾಷಣ ಮಾಡಿ, ಆಪರೇಷನ್ ಕಮಲದಲ್ಲಿ ತಾವು ಕೂಡ ಭಾಗಿಯಾಗಿದ್ದಾಗಿ ತಿಳಿಸಿದ್ದರು. ಈ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಎಸ್‌ಎಂ ಕೃಷ್ಣರವರ ಹೇಳಿಕೆ ಅಚ್ಚರಿಯಲ್ಲ. ಸಾವಿರಾರು ಕೋಟಿ ಆಪರೇಷನ್ ಕಮಲ ಒಬ್ಬ ವ್ಯಕ್ತಿಯಿಂದ ಆಗಿರುವಂಥದ್ದಲ್ಲ ಎಂದು ಹೇಳಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿರುವಂತೆ ಅಮಿತ್ ಶಾ ಮುಂದಾಳತ್ವದಲ್ಲಿ ಇಡೀ ರಾಷ್ಟ್ರೀಯ ಬಿಜೆಪಿ ನಾಯಕರ ತಂಡವೇ ಭಾಗಿಯಾಗಿದೆ. ಪ್ರಜಾಪ್ರಭುತ್ವ ಸಂವಿಧಾನ ಚುನಾವಣಾ ಪ್ರಕ್ರಿಯೆಗಳ ಕಗ್ಗೊಲೆ ಮಾಡಲು ಬಿಜೆಪಿಯ ಸರ್ವ ನಾಯಕರು ಭಾಗಿಯಾಗಿದ್ದಾರೆ. ಅನರ್ಹರ ಸೋಲು ಕರ್ನಾಟಕದ ಗೆಲುವು ಎಂದು ಕಾಂಗ್ರೆಸ್ ಪಕ್ಷ ಹೇಳಿ ಕೊಂಡಿದೆ.