ಬೆಂಗಳೂರು : ನಿಗದಿತ ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಪದೇ ಪದೆ ಬೀಗ ಹಾಕುವ ಬದಲು ಸ್ಥಿರ ಇಲ್ಲವೇ ಚರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಸಿವಿಲ್ ದಾವೆ ದಾಖಲಿಸಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವುದು ಒಳಿತು ಎಂದು ಹೈಕೋರ್ಟ್ ಸಲಹೆ ನೀಡಿದೆ.
ತೆರಿಗೆ ಬಾಕಿ ಪಾವತಿಸದ ಕಾರಣಕ್ಕೆ ಹಾಕಲಾಗಿರುವ ಬೀಗ ತೆರವುಗೊಳಿಸುವಂತೆ ನಿರ್ದೇಶನ ಕೋರಿ ಮಂತ್ರಿ ಮಾಲ್ ಆಡಳಿತ ಮಂಡಳಿ ಹಾಗೂ ಹಮಾರಾ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿ ಅರ್ಜಿ ವಿಲೇವಾರಿ ಮಾಡಿದೆ.
ಓದಿ: ಗಗನಯಾನ್ಗೆ ಸಿದ್ಧತೆ, ಕ್ರಯೋಜನಿಕ್ ಎಂಜಿನ್ ಅರ್ಹತಾ ಪರೀಕ್ಷೆ ಯಶಸ್ವಿ: ಇಸ್ರೋ
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದಿಸಿ, ಮಂತ್ರಿ ಮಾಲ್ ನಾಲ್ಕು ವರ್ಷಗಳಿಂದ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು 2021ರ ಡಿಸೆಂಬರ್ 5ರಂದು ಸಂಪೂರ್ಣ ಕಟ್ಟುವುದಾಗಿ ಕಳೆದ ವರ್ಷದ ಆರಂಭದಲ್ಲೇ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಆಡಳಿತ ಮಂಡಳಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೋವಿಡ್ ನೆಪ ಹೇಳಿ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬಾಕಿ ಪಾವತಿಸಿಲ್ಲ ಎಂದು ನೀವು ಪದೇ ಪದೇ ಬೀಗ ಹಾಕುವುದು. ಅವರು ಅಷ್ಟೋ - ಇಷ್ಟೋ ಪಾವತಿಸಿ ತಾತ್ಕಾಲಿಕ ಸಂಕಷ್ಟ ಬಗೆಹರಿಸಿಕೊಳ್ಳಲು ಬೀಗ ತೆರವಿಗೆ ಮನವಿ ಮಾಡುವುದು ಸಮಂಜಸವಲ್ಲ. ಬದಲಿಗೆ ಸಿವಿಲ್ ದಾವೆಯ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿತು.