ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಮೈ ಶುಗರ್ ಮತ್ತು ಪಿಎಸ್ಎಸ್ಬಿ ಸಕ್ಕರೆ ಕಾರ್ಖಾನೆಗಳ ಪುನಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ರೈತರ ನಿಯೋಗ ಭೇಟಿ ನೀಡಿ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆ. ಸಕ್ಕರೆ ಕಾರ್ಖಾನೆ ಆರಂಭ, ಕಬ್ಬು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ದರ್ಶನ್ ಪಟ್ಟಣ್ಣಯ್ಯ, ಮಂಡ್ಯ ಜಿಲ್ಲೆಯ ವಿಷಯ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಮೈ ಶುಗರ್ ಮತ್ತು ಪಿಎಸ್ಎಸ್ಬಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ಆ ಭಾಗದ ರೈತರಿಗೆ ಸಮಸ್ಯೆಯಾಗಿದೆ. ಇದನ್ನು ಪರಿಗಣಿಸಿದ ಸಿಎಂ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸಲು ಮಂಡ್ಯ ಮತ್ತು ಮೈಸೂರು ಡಿಸಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಕೆಆರ್ಎಸ್ ಜಲಾಶಯದ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅದಕ್ಕೆ ಸಿಎಂ ಸಕರಾತ್ಮಕವಾಗಿ ಸ್ಪಂಧಿಸಿದರು.ಅಲ್ಲಿನ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.