ಬೆಂಗಳೂರು: ನಗರದಲ್ಲಿ ನಿಯಮ ಉಲ್ಲಂಘನೆ ಮಾಡುವವರಿಗೆ ಸಂಚಾರಿ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸ್ತಿದ್ದಾರೆ. ಹೀಗಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರ ಕಣ್ತಪ್ಪಿಸಿ ಓಡಾಟ ಮಾಡುತ್ತಿದ್ದ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೈಕ್ ಸವಾರ ಅರುಣ್ ಕುಮಾರ್ ಪೊಲೀಸರಿಗೆ ಸಿಕ್ಕಿಬಿದ್ದ ಆಸಾಮಿ.
ಈತ ಸಿಲಿಕಾನ್ ಸಿಟಿಯಲ್ಲಿ ಹೆಲ್ಮೆಟ್ ಹಾಕದೆ, ವೇಗದ ಚಾಲನೆ, ಸಿಗ್ನಲ್ ಜಂಪ್ ಸೇರಿ ಬರೋಬ್ಬರಿ 77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ.
ಹೀಗಾಗಿ ಇಂದು ಮಡಿವಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‌ಐ ಶಿವರಾಜ್ ಕುಮಾರ್ ಕಾರ್ಯಾಚರಣೆ ಮಾಡ್ತಿರುವ ವೇಳೆ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ತಕ್ಷಣ ಇನ್ಸ್‌ಪೆಕ್ಟರ್ ಅಲರ್ಟ್ ಆಗಿ ಪರಿಶೀಲನೆ ಮಾಡುವ ವೇಳೆ ಬರೋಬ್ಬರಿ 77 ಬಾರಿ ನಿಯಮ ಉಲ್ಲಂಘನೆ ಮಾಡಿದ ವಿಚಾರ ಬಯಲಾಗಿದೆ. ಹೀಗಾಗಿ ಸದ್ಯ ಆತನಿಗೆ 42,500 ರೂ. ದಂಡ ವಿಧಿಸಿ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.