ಬೆಂಗಳೂರು: ಮಾದಕ ವಸ್ತು ಸರಬರಾಜು ಆರೋಪದಡಿ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರ ಕ್ರಮ ಎತ್ತಿಹಿಡಿರುವ ಹೈಕೋರ್ಟ್, ಈ ಕುರಿತು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಇದೇ ವೇಳೆ ಮಾದಕ ವಸ್ತುಗಳ ಅಕ್ರಮ ಸಾಗಾಟ ತಡೆ ಕಾಯ್ದೆ-1988ರ ಅಡಿಯಲ್ಲಿ ಬಂಧಿತನಾಗಿರುವ ವ್ಯಕ್ತಿ ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂಬುದನ್ನು ತಿಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ಡ್ರಗ್ ಪೆಡ್ಲಿಂಗ್ ಆರೋಪದಡಿ ಬಂಧಿತರಾಗಿರುವ ಬೆಂಗಳೂರಿನ ಮೊಹಮ್ಮದ್ ಕಾಶಿಫ್ ಎಂಬುವರ ಪತ್ನಿ ಖತೇಜುತಲ್ ನಜ್ಮಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ನ್ಯಾ. ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮಾದಕ ವಸ್ತುಗಳ ಅಕ್ರಮ ಸಾಗಾಟ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದಾಗ ಆ ಕುರಿತು ಮೇಲ್ವಿಚಾರಣೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಬಂಧನದ ಆದೇಶ ಮತ್ತು ಬಂಧನಕ್ಕೆ ಆಧಾರಗಳನ್ನು ಒಳಗೊಂಡ ವರದಿ ಸ್ವೀಕರಿಸಿದ ನಂತರವೇ ಈ ಅಧಿಕಾರ ಚಲಾಯಿಸಬಹುದು ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಾಧಿಕಾರ, ಸರ್ಕಾರ ಮತ್ತು ಸಲಹಾ ಮಂಡಳಿಗೆ ಮನವಿ ನೀಡುವ ಹಕ್ಕಿನ ಕುರಿತು ಬಂಧಿತನಿಗೆ ತಿಳಿಸಲಾಗಿದೆ. ಹೀಗಾಗಿ ಬಂಧನ ಆದೇಶ ಮತ್ತು ಬಂಧನ ಮಾಡಿರುವ ಕ್ರಮಗಳಲ್ಲಿ ಯಾವುದೇ ಲೋಪವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
2020ರಲ್ಲಿ ಡ್ರಗ್ ದಂಧೆಗೆ ಸಂಬಂಧಿಸಿದಂತೆ ದಾಖಲಿಸಿದ್ದ ದೂರಿನ ಮೇರೆಗೆ ಎಚ್‌ಎಎಲ್ ಠಾಣೆ ಪೊಲೀಸರು ಅನ್ನಸಂದ್ರಪಾಳ್ಯದ ಮುಸ್ಲಿಂ ಕಾಲೋನಿ ನಿವಾಸಿ ಕಾಶಿಫ್ ಎಂಬುವರನ್ನು ಆಗಸ್ಟ್ 31 ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಕಾಶಿಫ್ ಡ್ರಗ್ ಪೆಡ್ಲಿಂಗ್ ಜಾಲಕ್ಕೆ ಸಂಬಂಧಿಸಿದಂತೆ ಐದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ನೀಡಿದರೆಂಬ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದು, ಮರುದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪೊಲೀಸರು ಪತಿಯನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆಂದು ಕಾಶಿಫ್ ಪತ್ನಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾಶಿಫ್ ಬಂಧನ ಮಾದಕ ವಸ್ತುಗಳ ಅಕ್ರಮ ಸಾಗಾಟ ತಡೆ ಕಾಯ್ದೆ-1988ರ ಸೆಕ್ಷನ್ 12 (1) (ಎ) ಉಲ್ಲಂಘಿಸುತ್ತದೆ. ಅವರನ್ನು ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಇರುವ ಅವಕಾಶದ ಕುರಿತು ತಿಳಿಸಿಲ್ಲ.
ಹೀಗಾಗಿ, 2021ರ ಸೆಪ್ಟೆಂಬರ್ 9 ರ ಬಂಧನ ಆದೇಶ ಕಾನೂನಾತ್ಮಕವಾಗಿಲ್ಲ ಮತ್ತು ಸಂವಿಧಾನದ 22 (5) ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಸಂಚರಿಸಿದ 318 ವಾಹನಗಳು ಸೀಜ್