ಬೆಂಗಳೂರು: ಆತ ಓದಿದ್ದು ಪಿಯುಸಿ, ಆದರೆ ಹೇಳಿಕೊಳ್ಳುತ್ತಿದ್ದದ್ದು ಐಎಎಸ್, ಐಪಿಎಸ್, ಇಲ್ಲಾ ಕೆಎಎಸ್ ಟ್ರೈನಿಂಗ್ ಮಾಡ್ತಿದ್ದೇನಿ ಎಂದು. ಅಪ್ಪಿತಪ್ಪಿ ಹುಡುಗಿಯರು ಇವನ ಇನ್ಸ್ಟಾಗ್ರಾಂ ರಿಕ್ವೆಸ್ಟ್ ಓಕೆ ಮಾಡಿದ್ರೆ ಮುಗೀತು. ಅನಾಯಾಸವಾಗಿ ತನ್ನ ಕೆಲಸ ಮುಗಿಸಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ. ಹೀಗೆ, ಸತತ ಐದು ವರ್ಷಗಳಿಂದ ಹುಡುಗಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದವನು ಇದೀಗ ಅಂದರ್ ಆಗಿದ್ದಾನೆ.
ದಿವಾಕರ್ ಅಲಿಯಾಸ್ ಹರ್ಷ ಬಂಧಿತ ಆರೋಪಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಈತ, ನಾನು ಸಿವಿಲ್ ಸರ್ವಿಸ್ ಕೋಚಿಂಗ್ ನೀಡುತ್ತಿರುವುದಾಗಿ ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ. ಇವನ ಮಾತಿನ ದಾಟಿಗೆ, ಶೋಕಿಗೆ ಜನ ನಂಬಿ ಬಿಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಈತ, ಅಪ್ರಾಪ್ತ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್ ಕಳಿಸಿ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಗೆಳೆತನ ಬೆಳೆಸಿ ಫೋನ್ ನಂಬರ್ ಪಡೆದುಕೊಂಡು ಸಿವಿಲ್ ಸರ್ವಿರ್ಸ್ಗೆ ಸಿದ್ಧವಾಗುತ್ತಿದ್ದೇನೆ. ಇನ್ನೆರಡು ವರ್ಷದಲ್ಲಿ ಅಫೀಸರ್ ಅಗಿ ಬರುವುದಾಗಿ ನಂಬಿಸಿ ಭೇಟಿಯಾಗುತ್ತಿದ್ದ. ಇದನ್ನ ಹಿಂದೆ ಮುಂದೆ ನೋಡದೆ ನಂಬುವ ಹೆಣ್ಣು ಮಕ್ಕಳ ಬಳಿ ದೈಹಿಕ ಸಂಪರ್ಕ ಮಾಡಿ ವಿಡಿಯೋ, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದನಂತೆ. ಬಳಿಕ ಅವರಿಗೆ ಅವುಗಳನ್ನ ತೋರಿಸಿ ಬ್ಲಾಕ್ಮೇಲ್ ಮಾಡಿ ಹಣ ಪಡೆದುಕೊಳ್ಳುತ್ತಿದ್ದ. ಯಾರಿಗಾದರು ಹೇಳಿದ್ರೆ ಫೋಟೋ, ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಏಕಕಾಲಕ್ಕೆ ಎಂಟು ಹುಡುಗಿಯರ ಜೊತೆ ಲವ್ವಿ ಡವ್ವಿ..!
ಕಳೆದು ಐದು ವರ್ಷಗಳಿಂದ ಆರೋಪಿ ದಿವಾಕರ್ ಅಲಿಯಾಸ್ ಹರ್ಷ ಹತ್ತಾರು ಯುವತಿಯರಿಗೆ ಹೀಗೆ ಬ್ಲಾಕ್ಮೇಲ್ ಮಾಡಿ ವಂಚಿಸಿದ್ದಾನೆ. ಕಳೆದ ಕೆಲ ದಿನಗಳಿಂದ ಫುಲ್ ಆ್ಯಕ್ಟೀವ್ ಅಗಿದ್ದ ಆರೋಪಿ, ಬೆಂಗಳೂರಿನಲ್ಲಿ ಎಂಟು ಯುವತಿಯರ ಜೊತೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ. ಅದರ ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ. ಈ ಮಧ್ಯೆ ಓರ್ವ ಯುವತಿ ಧೈರ್ಯ ಮಾಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಬ್ಯಾಡರಹಳ್ಳಿ ಪೊಲೀಸರು, ಕಾಮುಕನ ಹೆಡೆಮುರಿ ಕಟ್ಟಿ ತಂದಿದ್ದಾರೆ.
ಓದಿ : ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನ ಪ್ರಕರಣಗಳ ನಾಲ್ವರು ಆರೋಪಿಗಳ ಬಂಧನ
ಆರೋಪಿಯ ವಿಚಾರಣೆ ವೇಳೆ ಈತ ಮೂಲತಃ ತುಮಕೂರಿನ ತುರುವೆಕೆರೆಯವನು ಎಂದು ತಿಳಿದು ಬಂದಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಯುವತಿಯರ ಸ್ನೇಹ ಬೆಳೆಸಿ, ಬಳಿಕ ದೊಡ್ಡ ಮನೆಗಳ ಮುಂದೆ ಸೆಲ್ಫಿ ತೆಗೆದು ಕಳಿಸಿ, ಬೆಂಗಳೂರಿನಲ್ಲಿ ತನ್ನದೇ ಕಂಪನಿಗಳಿವೆ ಎಂದು ಹೇಳಿ ನಂಬಿಸಿ ವಂಚಿಸಿದ್ದಾಗಿ ಹೇಳಿದ್ದಾನೆ.
ಸದ್ಯ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು ಮತ್ತಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.