ಬೆಂಗಳೂರು: ವೀರಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿ ನಿಗಮ ರಚನೆಯಾದ ಬೆನ್ನಲ್ಲೇ ವಿವಿಧ ಸಮುದಾಯಗಳು ನಿಗಮ ರಚನೆಗೆ ಬೇಡಿಕೆ ಇಡುತ್ತಿವೆ. ಇದೀಗ ನಾರಾಯಣಗುರು ಅಭಿವೃದ್ಧಿ ನಿಗಮ ರಚನೆಗೆ ಹಾಗೂ ಸಮುದಾಯವನ್ನು ಪ್ರವರ್ಗ 1 ಕ್ಕೆ ಸೇರಿಸುವ ಬೇಡಿಕೆಯೊಂದಿಗೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಿಎಂ ಕಚೇರಿ ಬಾಗಿಲು ತಟ್ಟಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈಡಿಗ ಸಮುದಾಯದ ಅಭಿವೃದ್ಧಿ ಕುರಿತು ಮಾತುಕತೆ ನಡೆಸಿದರು. ಬೇಡಿಕೆಗಳ ಪಟ್ಟಿಯನ್ನು ಸಿಎಂ ಮುಂದಿರಿಸಿ ಈಡೇರಿಕೆಗೆ ಮನವಿ ಮಾಡಿದರು. ಮನವಿ ಪತ್ರ ಸ್ವೀಕರಿಸಿದ ಸಿಎಂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶೈಕ್ಷಣಿಕ ಪರಿಸ್ಥಿತಿ ಅಧ್ಯಯನ: ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಭೇಟಿ ಮಾಡಿ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೇವೆ. ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಮೀಸಲಿಡಬೇಕು. ಈಡಿಗ ಸಮುದಾಯವನ್ನು ಪ್ರವರ್ಗ 1 ಕ್ಕೆ ಸೇರಿಸಲು ಮನವಿ ಮಾಡಿದ್ದೇವೆ. ಈಡಿಗ ಸಮುದಾಯದ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಅಧ್ಯಯನ ಮಾಡಬೇಕು. ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ 75 ಎಕರೆ ಜಮೀನು ಮಂಜೂರು ಮಾಡಿ ನಾರಾಯಣಗುರು ಪುತ್ಥಳಿ ನಿರ್ಮಾಣ, ಅಧ್ಯಯನ ಪೀಠ ರಚನೆ, ಹಾಸ್ಟೆಲ್ ನಿರ್ಮಾಣ ಮಾಡಲು ಅವಕಾಶ ನೀಡಲು ಮನವಿ ಮಾಡಿರುವುದಾಗಿ ತಿಳಿಸಿದರು.
ಎಂಎಸ್ಐಎಲ್ ಪರವಾನಗಿ ನೀಡಬೇಕು: ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಹಿಸದಂತೆ ಅವರು ಮನವಿ ಮಾಡಿದರು. ಪ್ರತಿ ಜಿಲ್ಲೆಯಲ್ಲಿ ನಮ್ಮ ಸಮುದಾಯಕ್ಕೆ 2 ಎಕರೆ ಜಮೀನು ಮಂಜೂರು ಮಾಡಬೇಕು. ಸಾರಾಯಿ ನಿಷೇಧದಿಂದ ಉದ್ಯೋಗ ಕಳೆದುಕೊಂಡ ಸಮುದಾಯದವರಿಗೆ ಎಂಎಸ್ಐಎಲ್ ಪರವಾನಗಿ ನೀಡಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದರು.