ಬೆಂಗಳೂರು: ನಮ್ಮ ಪಕ್ಷಕ್ಕೆ ಮೋಸ ಮಾಡಿ ಬಸವರಾಜ್ ಕೋಮುವಾದಿ ಪಕ್ಷಕ್ಕೆ ಹೋಗಿದ್ದಾರೆ. ಇದೊಂದು ಮಾತೃ ದ್ರೋಹ ಕೆಲಸ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರಮಾವು ವಾರ್ಡ್ ಚನ್ನಸಂದ್ರ ಬಳಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಬಸವರಾಜ್ ಅವರನ್ನು ಗುರುತಿಸಿ ಕಾಂಗ್ರೆಸ್ ಟಿಕೆಟ್ ಕೊಟ್ಟಿತ್ತು. ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾಗಿದ್ದ ಬಸವರಾಜ್ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗಿತ್ತು. ಹೀಗಿದ್ದರೂ ಮಾತೃ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದು ಯಾತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.
ಬಸವರಾಜ್ ಅವರು ಇಡಿ, ಐಟಿ, ಮೋದಿ, ಅಮಿತ್ ಶಾ ಒತ್ತಡದಿಂದ ಬಿಜೆಪಿಗೆ ಹೋದ್ರೊ ಗೊತ್ತಿಲ್ಲ. ಹಿಂದೆ ಬಿಜೆಪಿಯನ್ನ ತೆಗಳಿದ ಬಸವರಾಜ್ ಇವತ್ತು ಬಿಜೆಪಿ ಹೊಗಳುತ್ತಿದ್ದಾರೆ ಎಂದರು. ಯುಪಿಎ ಸರ್ಕಾರ, ಸಿದ್ದರಾಮಯ್ಯ ಸರ್ಕಾರ, ಈ ದೇಶ, ರಾಜ್ಯದ ಬಗ್ಗೆ ಚಿಂತೆ ಮಾಡಿ ಕೆಲಸ ಮಾಡಿದೆ, ಹಾಗಾಗಿ ಕಾಂಗ್ರೆಸ್ ಪಕ್ಷವನ್ನ ಮತ್ತೆ ಕೆ.ಆರ್.ಪುರಂನಲ್ಲಿ ಗೆಲ್ಲಿಸಿ ಎಂದರು.
ಮಾತು ಮುಂದುವರೆಸಿದ ಅವರು, ಕರ್ನಾಟಕದಲ್ಲಿ ಉಂಟಾದ ಜಲ ಪ್ರವಾಹಕ್ಕೆ ಪ್ರಧಾನಿ ಮೋದಿ ತಿರುಗಿ ನೋಡಿಲ್ಲ, ಮೋದಿ ಹಣವೂ ಕೊಟ್ಟಿಲ್ಲ, ಯಡಿಯೂರಪ್ಪ ದುಡ್ಡು ಬಿಚ್ಚಿಲ್ಲ, ನೋಟ್ ಬ್ಯಾನ್ ಮಾಡಿ ಮೋದಿ ಸಣ್ಣ ವ್ಯಾಪಾರಿಗಳನ್ನು ಜೀವಂತವಾಗಿ ಕೊಂದಿದ್ದಾರೆ. ಯುವಕರಿಗೆ ಉದ್ಯೋಗ ಸಿಗ್ತಿಲ್ಲ, 7 ವರ್ಷದ ಇತಿಹಾಸದಲ್ಲಿ ಅತ್ಯಂತ ಕಡಿಮೆಗೆ ಜಿಡಿಪಿ ಕುಸಿದಿದೆ, ದುಡ್ಡಿನ ಮದದಲ್ಲಿ ಬಿಜೆಪಿ ಅವರು ಚುನಾವಣೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.