ಬೆಂಗಳೂರು: ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ಹಬ್ಬದ ತಯಾರಿ ಕೂಡ ಜೋರಾಗಿದೆ. ಇತ್ತ ಬೆಂಗಳೂರು ಗಣೇಶ ಉತ್ಸವ ಸಮಿತಿ 2500 ಮಣ್ಣಿನ ಗಣೇಶ ಮೂರ್ತಿಗಳನ್ನ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಹೌದು, ಹಲವು ವರ್ಷಗಳಿಂದ ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಿಸಿಕೊಂಡು ಬರುತ್ತಿರುವ ಬೆಂಗಳೂರು ಗಣೇಶ ಉತ್ಸವ ಸಮಿತಿ, ಮಣ್ಣಿನ ವಿನಾಯಕನನ್ನು ಪ್ರತಿಷ್ಠಾಪಿಸುವ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಂದೇ ವೇಳೆ 2,500 ಮಂದಿ ಮಣ್ಣಿನ ಗಣೇಶ ಮೂರ್ತಿಗಳನ್ನ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ತಾವು ಕೂಡ ಎಲ್ಲರೊಡನೆ ಸೇರಿ ಗಣೇಶ ಮೂರ್ತಿಗಳನ್ನ ಮಾಡಿ ಸಂತಸ ಪಟ್ಟರು. ಜೊತೆಗೆ ಈ ಗಣೇಶ ಮೂರ್ತಿಗಳ ಒಳಗೆ ಹೂವಿನ ಗಿಡಗಳ ಬೀಜಗಳನ್ನ ಹಾಕಿ ನಿರ್ಮಿಸಲಾಯಿತು. ಇದರಿಂದ ಮನೆಯ ಹೂಕುಂಡಗಳಲ್ಲೆ ಗಣೇಶನನ್ನು ವಿಸರ್ಜಿಸಿದಾಗ, ಹೂ ಗಿಡಗಳು ಚಿಗುರುತ್ತವೆ. ಈ ಮೂಲಕ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ.
ವಿಶ್ವ ದಾಖಲೆಯಲ್ಲಿ ಭಾಗಿಯಾಗಿದ್ದಲ್ಲದೆ ತಮ್ಮ ಮನೆಯ ಗಣೇಶನ ಮೂರ್ತಿಯನ್ನು ತಾವೇ ಕೈಯಾರೇ ತಯಾರಿಸಿ ಖುಷಿ ಪಟ್ಟಿದ್ದಾರೆ.