ಬೆಂಗಳೂರು : ರಾಜ್ಯದಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ಸಮಗ್ರ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ನಿಯಮಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೋರಿ ಎಐಸಿಸಿಟಿಯು ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಮ್ಯಾನುಯೆಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ ನಡೆಸಲು ನ್ಯಾಯಾಲಯ ಹಿಂದೆಯೇ ನಿರ್ದೇಶಿಸಿದೆ. ಆದರೆ, ಈವರೆಗೆ ಅದು ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾಯ್ದೆ ಪ್ರಕಾರ ಮ್ಯಾನುಯೆಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ ನಡೆಸಲು ನೋಡಲ್ ಅಧಿಕಾರಿ ನೇಮಿಸಿರುವ ಕುರಿತು ಸರ್ಕಾರ ತಿಳಿಸಿದೆ.
ಹೀಗಾಗಿ, ಎರಡು ತಿಂಗಳಲ್ಲಿ ಮ್ಯಾನುಯೆಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ರಾಮನಗರದಲ್ಲಿ ಶೌಚಗುಂಡಿಗೆ ಬಿದ್ದು ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ 1 ಸಾವಿರ ಸ್ಕಾಲರ್‌ಶಿಪ್ ನೀಡಿರುವುದು ಕಣ್ಣೊರೆಸುವ ತಂತ್ರ. ಸ್ಕಾಲರ್‌ಶಿಪ್ ಹೇಗೆ ಕೊಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಕಾಯ್ದೆ ಅನ್ವಯ ಸ್ಕಾಲರ್‌ಶಿಪ್ ನೀಡುವುದು ಸರ್ಕಾರದ ಬಾಧ್ಯತೆ. ಆದರೆ, ಇದರಲ್ಲಿ ತಾರತಮ್ಯ ಇರಕೂಡದು ಎಂದು ಅಭಿಪ್ರಾಯಪಟ್ಟ ಪೀಠ, ಸ್ಕಾಲರ್‌ಶಿಪ್ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ 30 ದಿನಗಳಲ್ಲಿ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಇದೇ ವೇಳೆ ರಾಮನಗರದಲ್ಲಿ ಮೃತಪಟ್ಟ ಮೂವರು ಹಾಗೂ ಕಲಬುರಗಿಯಲ್ಲಿ ಸಾವನ್ನಪ್ಪಿರುವ ಇಬ್ಬರು ಕಾರ್ಮಿಕರ ಕುಟುಂಬಸ್ಥರಿಗೆ 30 ದಿನಗಳಲ್ಲಿ ಪರ್ಯಾಯ ಉದ್ಯೋಗ ನೀಡಬೇಕು. ಮ್ಯಾನುಯೆಲ್ ಸ್ಕ್ಯಾವೆಂಜರ್ಸ್‌ಗಳಿಗೆ ನೀಡಲಾಗುವ ಉಪಕರಣಗಳ ಸಮಗ್ರ ಪಟ್ಟಿಯನ್ನು 30 ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನ ಮುಂದೂಡಿತು.