ಬೆಂಗಳೂರು : ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿದೆ. ಹೀಗಾಗಿ ನಗರ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್‌ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿ.ಪರಮೇಶ್ವರ್, ಎಸಿಪಿ ಮೇಲ್ಮಟ್ಟ ಪೊಲೀಸ್ ಅಧಿಕಾರಿಗಳೊಂದಿಗೆ ಇಂದು ನಗರ ಪೊಲೀಸ್ ಇಲಾಖೆಯ ಕಾರ್ಯಗಳ ಬಗ್ಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಟ್ರಾಫಿಕ್ಗೆ ಅಪಖ್ಯಾತಿಗೆ ಒಳಗಾಗಿದೆ. ಸಂಚಾರ ದಟ್ಟಣೆ ಸಂಪೂರ್ಣವಾಗಿ ಕಡಿಮೆ ಮಾಡಲು ಆಯಾ ವಿಭಾಗದ ಪೊಲೀಸರು ಪೀಕ್ ಅವರ್‌ನಲ್ಲಿ ಕಡ್ಡಾಯವಾಗಿ ಸ್ಥಳದಲ್ಲಿರಬೇಕು. ಆಯಾ ವಿಭಾಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಹಿರಿಯ ಅಧಿಕಾರಿಗಳು ಖುದ್ದು ಫೀಲ್ಡಿಗಿಳಿದು ಕೆಲಸ ಮಾಡಬೇಕು. ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸುಧಾರಿಸಲು ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ.
ಜನಸಂದಣಿ ಪ್ರದೇಶ ಹಾಗೂ ಟ್ರಾಫಿಕ್ ಆಗುವ ಪ್ರದೇಶಗಳಲ್ಲಿ ಸರ್ವೆಲೆನ್ಸ್ ಮಾಡುವುದಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್ಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಪೀಕ್ ಅವರ್‌ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಟ್ರಾಫಿಕ್ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 10 ಮಂದಿ ಕಾನೂನು ವಿಭಾಗದ ಪೊಲೀಸರು ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ರಾಜಧಾನಿಯಲ್ಲಿ ಸಂಚಾರ ದಟ್ಟಣೆಯ ದೂರುಗಳು ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ಸಿಟಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಡ್ರಗ್ಸ್ ಫ್ರೀ ಸಿಟಿಗೆ ಪಣ : ರಾಜಧಾನಿಯಲ್ಲಿ ಮಾದಕ ವ್ಯಸ್ಯನ ದಂಧೆ ಹೆಚ್ಚಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ದಂಧೆಕೋರರ ವಿರುದ್ಧ ಕಠಿಣ ಕ್ರಮಗೊಳ್ಳಲು ಸೂಚಿಸಿದ್ದೇನೆ. ವೀಸಾ ಅವಧಿ ಮೀರಿದರೂ ಅಕ್ರಮ ವಾಸ ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿರುವ 106 ಮಂದಿ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ. ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ವಿದೇಶಾಂಗ ಇಲಾಖೆ ಮೂಲಕ ಅವರಿಗೆ ಮಾಹಿತಿ ನೀಡಲಾಗುವುದು. ಇದರೊಂದಿಗೆ ಡ್ರಗ್ಸ್ ಫ್ರೀ ಬೆಂಗಳೂರು ಮಾಡಲು ನಮ್ಮ ಉದ್ದೇಶವಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಪೊಲೀಸ್ ಇಲಾಖೆಯು ವರ್ಗಾವಣೆ ದಂಧೆಯಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಅವಧಿಯಲ್ಲಿ ವರ್ಗಾವಣೆ ದಂಧೆಯಾಗಿತ್ತು. ಈಗ ದಂಧೆ ಮಾಡಲು ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಪಿಎಸ್ಐ ಕೇಸ್ ಬಗ್ಗೆ ತನಿಖೆ ನಡೆಯುತ್ತಿದೆ. ನೇಮಕಾತಿ ಬಗ್ಗೆ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದು, ಹೆಚ್ಚು ಮಾತನಾಡುವುದಿಲ್ಲ ಎಂದರು.
2018ರಿಂದ ಬೆಂಗಳೂರು ನಗರ ಸೇಫ್ ಸಿಟಿ ಯೋಜನೆ ಶೇ.70ರಷ್ಟು ಕೆಲಸ ಮುಗಿದಿದೆ. 7 ಸಾವಿರ ಸಿಸಿಟಿವಿ ಕ್ಯಾಮರಾಗಳ ಪೈಕಿ 5 ಸಾವಿರ ಕ್ಯಾಮರ ಅಳವಡಿಸಲಾಗಿದೆ. ನಗರದಲ್ಲಿರುವ 111 ಪೊಲೀಸ್ ಠಾಣೆಗಳ ಪೈಕಿ 80 ಪೊಲೀಸ್ ಠಾಣೆಗಳಲ್ಲಿ ವ್ಯೂವ್ ಸೆಂಟರ್ ತೆರೆಯಲಾಗಿದೆ. 50 ಸೇಫ್ಟಿ ಹೈಲಾಂಡ್ ಗಳ ಪೈಕಿ 30 ಹೈಲ್ಯಾಂಡ್ ತೆರೆಯಲಾಗಿದೆ. ಮಹಿಳೆಯರಿಗೆ ತೊಂದರೆಯಾದರೆ ಅಳವಡಿಕೆ ಹೈಲ್ಯಾಂಡ್ ಬಟನ್ ಒತ್ತಿದರೆ ನೇರವಾಗಿ ಕಮಾಂಡ್ ಸೆಂಟರ್ ಗೆ ಮಾಹಿತಿ ರವಾನೆಯಾಗಲಿದೆ.
ಪೊಲೀಸರಿಗೆ ಈಗಾಗಲೇ ಬಾಡಿವೋರ್ನ್ ಕ್ಯಾಮರಾ ನೀಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಇದೇ ವೇಳೆ ಮತಾಂತರ ಕಾಯ್ದೆಗೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿ, ಈಗಗಾಲೇ ತಿದ್ದಿಪಡಿ ತರಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಜಾರಿಯಾದ ಕಾಯ್ದೆಯು ಸಂವಿಧಾನಕ್ಕೆ ವಿರೋಧವಾಗಿದೆ. ಹೀಗಾಗಿ ಅದನ್ನ ಸರಿಪಡಿಸುವ ಕೆಲಸವಾಗುತ್ತಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಇದನ್ನೂ ಓದಿ : ಬೆಂಗಳೂರಿನ ಮಾಲಿನ್ಯವು ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು: ಗ್ರೀನ್ಪೀಸ್ ಇಂಡಿಯಾ