ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಪ್ರತಿ ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಲುಪಿದ್ದು, ಅದರಲ್ಲಿ ಎರಡು ರಾಜ್ಯ ಸರ್ಕಾರಗಳು ಈ ಬಗ್ಗೆ ನೋಡಲ್ ಅಧಿಕಾರಿ ನೇಮಿಸಿ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ.
ಜೀವನ ನಡೆಸಲು ಉದ್ಯೋಗ ಅರಸಿ ವಿವಿಧ ರಾಜ್ಯಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿರುವ ಕಾರ್ಮಿಕರು, ವ್ಯಾಸಂಗಕ್ಕಾಗಿ ತೆರಳಿರುವ ವಿದ್ಯಾರ್ಥಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ತೆರಳಿರುವ ಪ್ರವಾಸಿಗರು ತಮ್ಮ ರಾಜ್ಯಗಳಿಗೆ ವಾಪಸ್ ತೆರಳಲು ಕಾಯುತ್ತಿದ್ದಾರೆ. ಕರ್ನಾಟಕದಿಂದಲೂ ಸಾಕಷ್ಟು ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಬೇರೆ ಬೇರೆ ರಾಜ್ಯಗಳಿಗೆ ತೆರಳಲು ಕಾಯುತ್ತಿದ್ದಾರೆ. ತಮ್ಮನ್ನ ತಮ್ಮ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಇಲ್ಲಿರುವವರು ಹಾಗೂ ಅನ್ಯ ರಾಜ್ಯದಲ್ಲಿ ಸಿಲುಕಿಕೊಂಡು ಕರ್ನಾಟಕಕ್ಕೆ ವಾಪಸಾಗಲು ಬಯಸಿರುವವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಇದೇ ರೀತಿ ಕೇಂದ್ರ ಸರ್ಕಾರಕ್ಕೆ ವಿವಿಧ ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಇದೀಗ ಈ ಆದೇಶ ಹೊರಡಿಸಿದ್ದು, ಅತ್ಯಂತ ವ್ಯವಸ್ಥಿತವಾಗಿ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಹಾಗೂ ಪ್ರವಾಸಿಗರನ್ನು ಕರೆ ತರುವ ಕಾರ್ಯವಾದರೆ ಸಮಸ್ಯೆ ಆಗುವುದಿಲ್ಲ ಎಂದಿದೆ.
ಮಹಾರಾಷ್ಟ್ರ ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಸಮುದಾಯ ಮಟ್ಟದಲ್ಲಿ ವ್ಯಾಪಿಸಿದ್ದು, ಅಲ್ಲಿಂದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಕಾರ್ಮಿಕರನ್ನು ಕರೆ ತರುವ ಸಂದರ್ಭ ಅವರು ಕೂಡ ಕೊರೊನಾ ಮಾರಿಯನ್ನು ತಮ್ಮೊಂದಿಗೆ ಹೊತ್ತು ತರುವ ಸಾಧ್ಯತೆ ಹೆಚ್ಚಿದೆ. ಇದಲ್ಲದೆ ದೂರದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಕರ್ನಾಟಕದವರು ದೊಡ್ಡ ಸಂಖ್ಯೆಯಲ್ಲಿ ಕೆಲಸ, ವಿದ್ಯಾಭ್ಯಾಸ ಅರಸಿ ತೆರಳಿದ್ದು ರಾಜ್ಯಕ್ಕೆ ವಾಪಸಾಗಲು ಕಾಯುತ್ತಿದ್ದಾರೆ. ಇವರನ್ನು ಸೂಕ್ತ ತಪಾಸಣೆ ನಡೆಸಿ ಕರೆ ತರುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.