ಬೆಂಗಳೂರು : ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಎಲ್ಲ ರೋಗಿಗಳಿಗೂ ಬೆಡ್ ಸಿಗುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಅಗತ್ಯವಿಲ್ಲದಿದ್ದರೂ ಆಸ್ಪತ್ರೆ ಸೇರುತ್ತಿದ್ದರೆ ಅಂತಹವರನ್ನು ನಿಯಂತ್ರಿಸಲು ಸೂಕ್ತ ಮಾರ್ಗಸೂಚಿ ರೂಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ, ಆಂಬ್ಯುಲೆನ್ಸ್, ಆಕ್ಸಿಜನ್, ಔಷಧ ಕೊರತೆ ಇಲ್ಲ. ರೆಮಿಡಿಸ್ವಿರ್ ಔಷಧಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 270 ಆ್ಯಂಬುಲೆನ್ಸ್ಗಳು ಸಜ್ಜಾಗಿದ್ದು, ಚಿಕಿತ್ಸೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸರ್ಕಾರದ ಪರ ವಕೀಲರ ವಾದ ದಾಖಲಿಸಿಕೊಂಡ ಪೀಠ ಕೆಲ ನಿರ್ದೇಶನಗಳನ್ನು ನೀಡಿ ವಿಚಾರಣೆ ಮುಂದೂಡಿತು.
ಹೈಕೋರ್ಟ್ ನಿರ್ದೇಶನಗಳು...
- ಪ್ರತಿ ಸೋಂಕಿತ ವ್ಯಕ್ತಿಗೂ ಹಾಸಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು
- ಅಗತ್ಯವಿಲ್ಲದವರು ಆಸ್ಪತ್ರೆಗೆ ದಾಖಲಾಗುತ್ತಿದ್ದರೆ ಮಾರ್ಗಸೂಚಿ ರೂಪಿಸಬೇಕು
- 24 ಗಂಟೆಗಳಲ್ಲಿ ಕೋವಿಡ್ ಪರೀಕ್ಷೆಯ ಆರ್ಟಿಪಿಸಿಆರ್ ವರದಿ ನೀಡಬೇಕು
- ವರದಿ ಬರುವವರೆಗೆ ಶಂಕಿತರು ಐಸೋಲೇಷನ್ನಲ್ಲಿ ಇರುವಂತೆ ನೋಡಿಕೊಳ್ಳಬೇಕು
- ಹಾಸಿಗೆಗಳ ಲಭ್ಯತೆ ಕುರಿತ ಮಾಹಿತಿಯನ್ನು ಆನ್ಲೈನ್ ಮಾಡಿ, ಆ ಕುರಿತು ನಿಗಾ ಇಡಬೇಕು
- ಕೋವಿಡ್ ಸೋಂಕಿತರು ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಅರಿವು ಮೂಡಿಸಬೇಕು
- ರಾಜಕೀಯ ಸಭೆಗಳನ್ನು ನಡೆಸಲು ಅವಕಾಶ ನೀಡಿರುವ ಬಗ್ಗೆ ಸರ್ಕಾರ ಮರುಪರಿಶೀಲಿಸಬೇಕು
- ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಮತ್ತು ಪೌರ ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು
- ಆಸ್ಪತ್ರೆಗಳಲ್ಲಿ ಅಧಿಕ ದರ ವಿಧಿಸಿದರೆ ಸಹಾಯವಾಣಿ ಸಂಖ್ಯೆ 1800-425-2646 / 1800-425-8330ಗೆ ಕರೆ ಮಾಡಬಹುದು
- ಸಹಾಯವಾಣಿ ಸಂಖ್ಯೆ ಬಗ್ಗೆ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಜಾಹಿರಾತು ಪ್ರದರ್ಶಿಸಬೇಕು
- ಕೋವಿಡ್ ಸಂಬಂಧಿ ದೂರುಗಳು ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ವಿವಿಧ ಕ್ಷೇತ್ರದ ಗಣ್ಯರನ್ನೊಳಗೊಂಡ ಸಮಿತಿ ರಚಿಸಬೇಕು
ಹೀಗೆ ಹಲವು ನಿರ್ದೇಶನಗಳು ಹೈಕೋರ್ಟ್ ಸರ್ಕಾರಕ್ಕೆ ನೀಡಿ ವಿಚಾರಣೆಯನ್ನು ಮುಂದೂಡಿದೆ.