ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು.
![ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು](https://etvbharatimages.akamaized.net/etvbharat/prod-images/kn-bng-07-rajbhavana-celebration-script-7208077_15012022194102_1501f_1642255862_107.jpg)
ನಂತರ ಮಾತನಾಡಿದ ಅವರು, ಕರ್ನಾಟಕದ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ದೇವರು ಆರೋಗ್ಯ, ಆಯಸ್ಸು ಮತ್ತು ಶಾಂತಿಯನ್ನು ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಕೋವಿಡ್ ಮಹಾಮಾರಿ ಹಾವಳಿ ಇರುವುದರಿಂದ ನಾಗರಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
![ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು](https://etvbharatimages.akamaized.net/etvbharat/prod-images/kn-bng-07-rajbhavana-celebration-script-7208077_15012022194102_1501f_1642255862_659.jpg)
ಕರ್ನಾಟಕದ ರಾಜ್ಯಪಾಲರಾಗಿ ನಿಯೋಜಿತರಾದ ನಂತರ ಮೊದಲ ಸಂಕ್ರಾಂತಿಯನ್ನು ಆಚರಿಸುತ್ತಿದ್ದು, ಇದನ್ನು ರಾಜಭವನದಲ್ಲೇ ಆಚರಿಸುವ ಮೂಲಕ ವಿಶಿಷ್ಟತೆ ಮೆರೆದರು. ಈ ಹಿಂದೆ ಸುದೀರ್ಘ ಅವಧಿಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ವಜುಬಾಯಿ ವಾಲಾ ಸಹ ಪ್ರತಿ ವರ್ಷ ಸಂಕ್ರಾಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು.
ಬಿಎಂಟಿಸಿ ಅಧ್ಯಕ್ಷರ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ :
ಕೆ.ಆರ್.ಪುರದ ಮಾಜಿ ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಅವರು ತಮ್ಮ ಮನೆಯಲ್ಲಿ ವಿವಿಧ ತಳಿಯ ಹಸುಗಳನ್ನು ಸಾಕಿ ಸಲಹುತ್ತಿದ್ದು, ಸಂಕ್ರಾಂತಿ ಹಬ್ಬ ಬಂತೆಂದರೆ ಕುಟುಂಬ ವರ್ಗದವರೆಲ್ಲರು ಸೇರಿ ಸಡಗರ ಸಂಭ್ರಮದಿಂದ ರಾಸುಗಳನ್ನು ಪೂಜಿಸಿ ಹಬ್ಬ ಆಚರಿಸುತ್ತಾರೆ.
ಅದೇ ರೀತಿಯಲ್ಲಿ ಶನಿವಾರ ತಮ್ಮ ನಿವಾಸದಲ್ಲಿ ಸಾಕಿರುವ ಹಸು ಕರುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ಕಿಚ್ಚಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಈ ಬಾರಿ ಕೀರ್ತನೆಗಳನ್ನು ಹಾಡಿಸುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರೆಗು ಹೆಚ್ಚಿಸಿದರು. ಎಲ್ಲರಿಗೂ ಎಳ್ಳು ಬೆಲ್ಲ ನೀಡಿ ಶುಭಾಶಯ ಕೋರಿದರು.
ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕೊರೊನಾ ಮಹಾಮಾರಿ ಬಂದು ಜನರು ಸಂಕಷ್ದ ಜೀವನ ನಡೆಸುವಂತ ಪರಿಸ್ಥಿತಿ ಬಂದಿದೆ. ಕೊರೊನಾ ಈ ಪ್ರಪಂಚದಿಂದ ದೂರವಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.