ಬೆಂಗಳೂರು : ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತ ಭಾರತಕ್ಕೆ ಮಾತ್ರ ಸೀಮಿತಲ್ಲ. ವಾಸ್ತವವಾಗಿ ಇಡೀ ಜಗತ್ತು ಅವರ ಬೋಧನೆಗಳನ್ನು ಅನುಸರಿಸುತ್ತಿದೆ ಎಂದು ಪ್ರೊ.ಎಸ್ ಜಾಫೆಟ್ ತಿಳಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ 151ನೇ ಗಾಂಧಿ ಜಯಂತಿ ಆಚರಿಸಲಾಯಿತು. ಕುಲಪತಿಗಳಾದ ಪ್ರೊ. ಎಸ್ ಜಾಫೆಟ್ ಹಾಗೂ ಕುಲಸಚಿವ ಡಾ. ಶಿವರಾಂ, ಮೌಲ್ಯಮಾಪನ ಕುಲಸಚಿವ ಬಿ. ರಮೇಶ್ ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಳಿಕ ಮಾತಾನಾಡಿದ ಪ್ರೊ. ಎಸ್ ಜಾಫೆಟ್, ಗಾಂಧೀಜಿಯವರ ಜೀವನ ನಾಯಕತ್ವಕ್ಕೆ ಸ್ಫೂರ್ತಿ. ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಪ್ರಮುಖವಾಗಿದೆ. ಅವರ ಕೊಡುಗೆಗಳು ಅಪಾರ. ಆದ್ದರಿಂದ ಅವರಿಗೆ ಭಾರತದ ರಾಷ್ಟ್ರಪಿತ ಎಂಬ ಬಿರುದು ನೀಡಲಾಯಿತು. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಾಸ್ತವವಾಗಿ ಇಡೀ ಜಗತ್ತು ಅವರ ಬೋಧನೆಗಳನ್ನು ಅನುಸರಿಸುತ್ತಿದೆ. ಹಾಗಾಗಿ, ಅವರ ಆಲೋಚನೆಗಳು ಸದಾ ಜನರ ಹೃದಯದಲ್ಲಿ ನೆಲೆಸಿವೆ ಎಂದರು.
ಅವರ ಪ್ರಮುಖ ತತ್ತ್ವ ಸಿದ್ಧಾಂತವೆಂದ್ರೆ ಅದು ಸತ್ಯ ಮತ್ತು ಅಹಿಂಸೆ. ಗಾಂಧಿ ತಮ್ಮ ಆತ್ಮಚರಿತ್ರೆ "ನನ್ನ ಸತ್ಯಾನ್ವೇಷಣೆ"ಯಲ್ಲಿ ಸತ್ಯ ಮತ್ತು ಅಹಿಂಸೆಗಳು ತಲೆತಲಾಂತರದಿಂದ ಬಂದ ನೀತಿ ಬೋಧನೆಗಳಾಗಿವೆ. ಅದರಲ್ಲಿ ಹೊಸದಾಗಿ ಹೇಳುವುದು ಏನೂ ಇಲ್ಲ ಎಂದು ಹೇಳಿದ್ದರು. ಈ ಸತ್ಯ ಅಹಿಂಸೆಗಳು ಗಾಂಧೀಜಿಯವರ ಮುಖವಾಡ ಮಾತ್ರ ಆಗಿರದೆ ಅದರಂತೆ ಬದುಕಿ ತೋರಿಸಿದ್ದರು.
ಶಿಕ್ಷಣ ಅಂದರೆ ಮಾನವನನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ ಎಂದಿದ್ದ ಗಾಂಧೀಜಿಯವರು, ದೇಹ, ಮಿದುಳು ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ ಎಂದು ಪ್ರತಿಪಾದಿಸಿದ್ದರು. ಅಹಿಂಸೆಯು ಶಿಕ್ಷಣದ ತಳಹದಿಯಾಗಬೇಕು. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯ ರೂಪಿಸಬೇಕು. ನಮ್ಮ ಈಗಿನ ಶಿಕ್ಷಕರು ಗಾಂಧೀಜಿಯವರ ಈ ತತ್ವಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಅವರಂತೆ ಸತ್ಯ ಮತ್ತು ಅಹಿಂಸೆಗಳೊಂದಿಗೆ ಬದುಕಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಈಗಿನ ಹೊಸ ಶಿಕ್ಷಣ ನೀತಿಯು ಸಹ ಗಾಂಧೀಜಿಯವರ ಒಂದು ಕನಸಾಗಿತ್ತು. ಅದನ್ನು ನಮ್ಮ ಕೇಂದ್ರ ಸರ್ಕಾರವು ನನಸಾಗಿಸಿದೆ. ಗಾಂಧೀಜಿಯವರ ಕಲ್ಪನೆಯು ಸರ್ವೋದಯ ಸಮಾಜ ರಚನೆಗೆ ಸಮಾನತೆ, ಸಹಕಾರ,ಪ್ರೇಮ, ಅಹಿಂಸೆ ಈ ಅಂಶಗಳು ಆಧಾರವಾಗಿರುತ್ತವೆ. ಅದಕ್ಕೆ ಜನತೆಯಲ್ಲಿ ಜ್ಞಾನ, ಉದ್ಯೋಗ ಪ್ರಸಾರ, ದಾರಿದ್ರ್ಯ ನಿವಾರಣೆ ಇವು ಅಗತ್ಯವಾಗಿ ಸಮಾಜ ಪರಿವರ್ತನೆಗೆ ಉಪಕರಣ ಎಂಬುದನ್ನು ಅವರು ಗ್ರಹಿಸಿದ್ದರು. ಹೀಗಾಗಿ, ಸರ್ವೋದಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು ಎಂದು ನೆನೆದರು.
ನಿಮ್ಮನ್ನು ನೀವು ಕಂಡುಕೊಳ್ಳುವ ಬಗ್ಗೆ ಯಾವುದಾದ್ರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ. ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂತದಲ್ಲ. ಅದು ಅದಮ್ಯ ಅಂತಃಶಕ್ತಿಯಿಂದ ಬರುವಂತದ್ದು, ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತವೆ.
ದೇವರ ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು ಎಂದ ಅವರು, ಗಾಂಧೀಜಿಯವರು "ನನ್ನ ಜೀವನವೇ ನನ್ನ ಸಂದೇಶ" ಎಂದು ಸಾರಿದ್ದಾರೆ. ನಾವೆಲ್ಲರೂ ಅವರ ಸಂದೇಶದಂತೆ ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ರಾಷ್ಟ್ರವನ್ನು ಕಟ್ಟುವ ಹಾಗೂ ಮುನ್ನಡೆಸುವ ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.