ಬೆಂಗಳೂರು/ಬೆಳಗಾವಿ: ಮತ್ತೊಂದು ರಾಜ್ಯಕ್ಕೆ ನುಗ್ಗಿ ಬರುತ್ತೇವೆ ಎಂಬ ಮಹಾರಾಷ್ಟ್ರದ ಪ್ರವೃತ್ತಿ ಖಂಡನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ ನಡೆದ ಗಡಿ ವಿವಾದದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ, ಇನ್ನೊಂದು ರಾಜ್ಯಕ್ಕೆ ನುಗ್ಗಿ ಬರುತ್ತೇವೆ ಎಂಬ ಪ್ರವೃತ್ತಿ ಖಂಡನೀಯ. ಅವರ ಧೋರಣೆ ಏನು ಎಂದು ಜಗತ್ತಿಗೆ ಗೊತ್ತಾಗುತ್ತಿದೆ. ನಮ್ಮ ಗಡಿ ರಕ್ಷಣೆ ನಾವು ಮಾಡುತ್ತೇವೆ. ಗಡಿಯಲ್ಲಿ ಇದ್ದ ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ ಎಂಬ ಸಂದೇಶ ಕೊಟ್ಟಿದ್ದೇವೆ.
ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬರುವ ವಿಚಾರವಾಗಿ ನಿಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಪತ್ರ ಬರೆಸಬಾರದಿತ್ತು ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ಹೇಳಿದ್ದರು. ಅದಕ್ಕೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಈ ರೀತಿಯಲ್ಲಿ ಬರೋದೇ ತಪ್ಪು. ನಮ್ಮವರು ಯಾರಾದರೂ ಬರ್ತೀವಿ ಅಂದಿದ್ವಾ?. ನೀವು ಬರೋದನ್ನು ನಿಯಂತ್ರಣ ಮಾಡಬೇಕಿತ್ತು. ಆದರೆ ಅದು ಆಗದಿದ್ದಾಗ ಕಾನೂನು ಪ್ರಕಾರ ಪತ್ರವನ್ನು ಬರೆದಿದ್ದೇವೆ. ಅದು ಸರಿ ಇದೆ ಎಂದು ನಾನು ಉತ್ತರ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಆ ಪತ್ರ ಭವಿಷ್ಯದಲ್ಲಿ ಮುಖ್ಯ ದಾಖಲೆ ಆಗಲಿದೆ. ಮಹಾರಾಷ್ಟ್ರ ಹೇಗೆ ಕಾನೂನು ವಿರುದ್ಧ ಹೋಗುತ್ತಿದೆ. ಹಾಗೂ ಕಾನೂನು ಸುವ್ಯವಸ್ಥೆಗೆ ಹೇಗೆ ಧಕ್ಕೆ ಉಂಟು ಮಾಡುತ್ತಿದೆ. ಅನ್ನುವುದಕ್ಕೆ ಪತ್ರ ದಾಖಲೆ ಆಗುತ್ತದೆ. ಈ ಬಾರಿ ಬೆಳಗಾವಿಯಲ್ಲಿ ಮಹಾಮೇಳಕ್ಕೂ ಅವಕಾಶ ಕೊಟ್ಟಿಲ್ಲ. ಯಾವುದೇ ಕಾರಣಕ್ಕಾಗಿ ಅವಕಾಶ ಕೊಡಬಾರದು ಎಂಬ ದಿಟ್ಟ ನಿಲುವು ಕೈಗೊಂಡಿದ್ದೇವೆ. ಆದರೂ ಎಂಪಿ ಬರುತ್ತೇವೆ ಎಂದಾಗ ಅವರು ಬಂದರೆ ಬಂಧನ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಸಿಎಂ ತಿಳಿಸಿದರು.
ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ.. ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ