ಮಹದೇವಪುರ : ವಲಯ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಸಭೆ ವೈಟ್ಫೀಲ್ಡ್ನ ಖಾಸಗಿ ಹೋಟೆಲ್ವೊಂದರಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಶನಿವಾರ ಈ ಬಗ್ಗೆ ಸಭೆ ನಡೆಸಿ ಮಹದೇವಪುರ ವಲಯಗಳಲ್ಲಿ ಬರುವ 32 ಆಸ್ಪತ್ರೆಗಳಲ್ಲಿ ಶೇಕಡಾ 50 ಬೆಡ್ ಗಳನ್ನು ಕಾಯ್ದಿರಿಸುವಂತೆ ಹಾಗೂ ದಿನನಿತ್ಯ ಸ್ಯಾನಿಟೈಸೇಷನ್, ವಾರ್ಡ್ ಗೆ ಎರಡು ಆಂಬ್ಯುಲೆನ್ಸ್ ನೀಡಲು ತಿಳಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದರಿಂದಾಗಿ ಅಸಮಾಧಾನಗೊಂಡ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಶನಿವಾರದೊಳಗೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಸ್ಯಾನಿಟೈಸೇಷನ್ ಆಗಿರಬೇಕು ಎಂದು ಸೂಚನೆ ನೀಡಿದರು.
ಶನಿವಾರ ಮಹದೇವಪುರ ವಲಯ ವ್ಯಾಪ್ತಿಯ 31 ಖಾಸಗಿ ಆಸ್ಪತ್ರೆಗಳ ಮಾಲಿಕರ ಸಭೆ ಕರೆದಿದ್ದು, ಶೇ.50 ರಷ್ಟು ಬೆಡ್ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲು ಆದೇಶ ನೀಡುತ್ತೇನೆ. ಕಂಟೇನ್ಮೆಂಟ್ ಝೋನ್ಗಳಲ್ಲಿ ಜನರಿಗೆ ಅವಶ್ಯಕ ಸಾಮಗ್ರಿಗಳನ್ನು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮಹದೇವಪುರ ವಲಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಜನತೆಗೆ ಧೈರ್ಯ ತುಂಬಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರ ಪಡೆದು ಸಮನ್ವಯತೆಯಂತೆ ಕಾರ್ಯ ಮಾಡುವ ಮೂಲಕ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.