ಬೆಂಗಳೂರು: ರಾಜ್ಯದ ಯಾವುದೇ ಜನಪ್ರತಿನಿಧಿಯ ಮೇಲೆ ಕಮೀಷನ್ ಆರೋಪದ ದಾಖಲೆಯಿದ್ದರೆ ತಕ್ಷಣವೇ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾಮಗಾರಿಗಳನ್ನು ಪಡೆದವರು ನಲವತ್ತು ಪರ್ಸೆಂಟ್ ಕಮೀಷನ್ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಜನಪ್ರತಿನಿಧಿ ಮೇಲೆ ಕಮೀಷನ್ ಆರೋಪದ ನಿಖರವಾದ ದಾಖಲೆಗಳಿದ್ದರೆ ಅವರ ವಿರುದ್ದ ತನಿಖೆ ನಡೆಸಲು ಅನುಮತಿ ನೀಡಲಾಗುವುದು ಎಂದರು.
ಕೆಂಪಣ್ಣ ಅವರು, ರಾಜ್ಯದ ಎಲ್ಲ 224 ಜನಪ್ರತಿನಿಧಿಗಳು ಕಮೀಷನ ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ. ಹೀಗೆ ಆರೋಪಿಸುವ ಬದಲು ನಿಖರವಾದ ದಾಖಲೆಗಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ಕೊಡಬಹುದು. ಅವರು ಕೊಡುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ತನಿಖೆ ಮಾಡುತ್ತದೆ. ಒಂದು ವೇಳೆ ಲೋಕಾಯುಕ್ತಕ್ಕೆ ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು, ಇಲ್ಲವಾದಲ್ಲಿ ಮಾಧ್ಯಮಕ್ಕಾದರೂ ದಾಖಲೆ ನೀಡಲಿ. ಅದನ್ನು ಬಿಟ್ಟು ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ. ಇದು ರಾಜ್ಯದ ಮಾನ ಹೋಗುವ ಪ್ರಶ್ನೆ. ಈ ರೀತಿಯ ಆರೋಪವನ್ನು ಸರ್ಕಾರ ಖಂಡಿಸುತ್ತದೆ ಎಂದರು.
ಇದನ್ನೂ ಓದಿ:ಸಚಿವ ಸಂಪುಟ ಸಭೆಯಲ್ಲಿ ಭಾವುಕರಾದ ಸಚಿವ ವಿ ಸೋಮಣ್ಣ: ಕಮಿಷನ್ ಆರೋಪದ ಬಗ್ಗೆ ಗಂಭೀರ ಚರ್ಚೆ