ಬೆಂಗಳೂರು: ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಅಭಿವೃದ್ಧಿ ನಿಗಮಕ್ಕೆ(ಕೆಎಸ್ಡಿಎಲ್) ಕಚ್ಚಾವಸ್ತುಗಳು ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸಿದ ಪ್ರಕರಣ ಸೇರಿದಂತೆ ಈ ರೀತಿಯ ಲಂಚ ಪಡೆಯುವ ಪ್ರಕರಣಗಳನ್ನು ವಿಶೇಷ ತನಿಖಾ ದಳ(ಎಸ್ಐಟಿ) ರಚನೆ ಮಾಡಿ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದರಿಂದ ಶ್ರೀರಾಮ ಸೇನೆ ಅರ್ಜಿಯನ್ನು ಹಿಂಪಡೆದಿದೆ.
ಶ್ರೀರಾಮಸೇನೆಯ ದಾವಣಗೆರೆಯ ಜಿಲ್ಲಾ ಘಟಕದ ಅಧ್ಯಕ್ಷ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಡಾಳ್ ವಿರುಪಾಕ್ಷಪ್ಪ ಮನೆ ಮೇಲೆ ದಾಳಿ ನಡೆಸಿದ ಸಂದರ್ಭಗಳಲ್ಲಿ ಕೋಟ್ಯಾಂತರ ರೂ.ಗಳು ಸಿಕ್ಕಿದೆ. ಇದೇ ರೀತಿಯಲ್ಲಿ ಈ ಹಿಂದೆಯೂ ಹಲವು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮನೆಗಳಲ್ಲಿ ಕೋಟ್ಯಾಂತರ ಬೆಲೆ ಬಾಳುವ ಚಿನ್ನಾಭರಣ ಮತ್ತು ಹಣ ಸಿಕ್ಕಿದೆ. ಈ ಪ್ರಕರಣಗಳು ಕೆಲ ದಿನಗಳ ಕಾಲ ಸುದ್ದಿಯಲ್ಲಿದ್ದು, ಬಳಿಕ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಈ ರೀತಿಯ ಪ್ರಕರಣಗಳನ್ನು ವಿಶೇಷ ತನಿಖಾ ಸಂಸ್ಥೆ ಅಥವಾ ಪ್ರತ್ಯೇಕ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ, ಲೋಕಾಯುಕ್ತ ಸಂಸ್ಥೆಯು ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಮಾಡಾಳ್ ಪ್ರಕರಣದಲ್ಲಿ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಇದರಿಂದ ಪಾರದರ್ಶಕ ತನಿಖೆಗೆ ನಡೆಯುವುದು ಕಷ್ಟಸಾಧ್ಯ. ಹೀಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬುದಕ್ಕೆ ಕಾರಣ ತೋರಿಸಿ ಎಂದು ಕೇಳಿತು. ಅಲ್ಲದೇ, ನೀವು ಉನ್ನತ ಪ್ರಾಧಿಕಾರವನ್ನು ಸಂಪರ್ಕಿಸಿ ಅವರ ಗಮನಕ್ಕೆ ವಿಚಾರ ತರಬೇಕು ಎಂದು ಸೂಚನೆ ನೀಡಿತು. ಜೊತೆಗೆ, ಒಬ್ಬರು ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಿದ ಕೂಡಲೇ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿ ವಜಾಗೊಳಿಸಲಾಗುವುದು ಎಂದು ತಿಳಿಸಿತು. ಅಲ್ಲದೆ, ತನಿಖೆಯಲ್ಲಿ ಲೋಪವಾಗಿದ್ದರೆ, ಆ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.
ಈ ಕುರಿತು ದಾಖಲೆಗಳನ್ನು ನ್ಯಾಯಪೀಠ, ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಅರ್ಜಿದಾರರು ಮೊದಲು ಅದನ್ನು ಪಾಲಿಸಬೇಕು. ಸಕ್ಷಮ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿರುವ ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ತೋರಿಸಿ ಎಂದು ಪೀಠ ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು. ಅಲ್ಲದೆ, ಅರ್ಜಿದಾರರು ತಮ್ಮ ಅಹವಾಲುಗಳನ್ನು ಒಳಗೊಂಡ ಮನವಿಯನ್ನು ತುರ್ತಾಗಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಸಕ್ಷಮ ಪ್ರಾಧಿಕಾರವು ಅಷ್ಟೇ ವೇಗವಾಗಿ ಮನವಿಯ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಹೇಳಿ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿಸಿತು.
ಇದನ್ನೂ ಓದಿ; ಲೋಕಾಯುಕ್ತ ಕಚೇರಿಯಲ್ಲೇ ರಾತ್ರಿ ಕಳೆದ ಮಾಡಾಳ್ ವಿರೂಪಾಕ್ಷಪ್ಪ