ಬೆಂಗಳೂರು: ಮಾಚೋಹಳ್ಳಿ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್ (28) ಬಂಧಿತ ಆರೋಪಿಯಾಗಿದ್ದು, ಸ್ಥಳೀಯ ಖಾಸಗಿ ವಾಹಿನಿಯ ಮುಖ್ಯಸ್ಥನಾಗಿದ್ದಾನೆ.
ಕಳೆದ ವರ್ಷ ಏಪ್ರಿಲ್ 15 ರಂದು ಮಾಚೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮೀನಾರಾಯಣನನ್ನು ಕೊಲೆ ಮಾಡಲಾಗಿತ್ತು. ಸರ್ಕಾರಿ ನಿವೇಶನ ಒತ್ತುವರಿ ವಿಚಾರವಾಗಿ ಆರೋಪಿಯ ಕಡೆಯವರು ಹಾಗೂ ಲಕ್ಷ್ಮೀ ನಾರಾಯಣನ ನಡುವೆ ವಾಗ್ವಾದಗಳಾಗಿದ್ದವು. ನಿವೇಶನ ಒತ್ತುವರಿ ಪ್ರಶ್ನಿಸಿದ್ದ ಲಕ್ಷ್ಮೀನಾರಾಯಣನ ಮೇಲೆ ಹಾಡಹಗಲೇ, ಮೂರ್ನಾಲ್ಕು ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮೀನಾರಾಯಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮೋಹನ್ ಕುಮಾರ್ನನ್ನು ಇದೀಗ ಬಂಧಿಸಿ, ಮಾದನಾಯಕನಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಹಾಗೆಯೇ ಆರೋಪಿ ಸರ್ಕಾರಿ ನಿವೇಶನ ಒತ್ತುವರಿ ಮಾಡುವುದರಲ್ಲಿ ಬಹಳ ಅಕ್ರಮವೆಸಗಿದ್ದು, ಸದ್ಯ ಎಲ್ಲಾ ಆಯಾಮದಲ್ಲಿ ತನಿಖೆ ಮುಂದುವರೆದಿದೆ.