ಬೆಂಗಳೂರು: ಹದಿನೈದು ದಿನಗಳ ಅಂತರದಲ್ಲಿ ಎರಡನೇ ಗ್ರಹಣ ಇಂದು ಸಂಭವಿಸುತ್ತಿದೆ. ಇಂದು ಸಂಜೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ಮೋಕ್ಷದ ಬಳಿಕವಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.
ಪ್ರಮುಖವಾಗಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ ದೊಡ್ಡ ಗಣೇಶ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ. ಮಧ್ಯಾಹ್ನದ ಬಳಿಕ ದೇಗುಲಗಳು ಮುಚ್ಚಲಿದ್ದು, ಸಂಜೆ ಗ್ರಹಣದ ಬಳಿಕವೇ ಶುದ್ಧಿಕಾರ್ಯ ನಡೆಸಿ ಅನುವು ಮಾಡಿಕೊಡಲಾಗುತ್ತದೆ.
ಈ ಕುರಿತು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್ ಮಾತನಾಡಿ, "ಗ್ರಹಣದಿಂದ ಸಾಕಷ್ಟು ತೊಂದರೆ ಆಗಬಹುದು. ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ಗ್ರಹಣ ತೊಂದರೆ ಸಾಧ್ಯತೆಯಿದೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ಬಳಿಕ ದೇವಸ್ಥಾನವನ್ನು ಬಂದ್ ಮಾಡಲಾಗುವುದು. ಸಂಜೆ 7 ಗಂಟೆಯ ಬಳಿಕ ಬಾಗಿಲು ತೆರೆದು ಶುದ್ಧೀಕರಣ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು" ಎಂದರು.
ನಗರದ ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದ 10 ಗಂಟೆಯವರೆಗೆ ಪೂಜೆಗಳು ನಡೆಯಲಿವೆ. ಬಳಿಕ ದೇವಾಲಯದ ಬಾಗಿಲು ಮುಚ್ಚಿರಲಿದೆ. ಮಧ್ಯಾಹ್ನ 2.39 ರಿಂದ ಸಂಜೆ 6.15 ರವರೆಗೆ ಗ್ರಹಣದ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ದೇವಾಲಯವನ್ನು ಶುಚಿಗೊಳಿಸಿ ಸಂಜೆ 7.30 ರ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಆರಂಭದಿಂದ ಮೋಕ್ಷಕಾಲದವರೆಗೆ ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶಾಂತಿ ಪೂಜೆಗಳು ನಡೆಯಲಿವೆ. ಬಳಿಕ ಪೂರ್ಣಾಹುತಿ ಮಾಡಿ, ದೇವಿಗೆ ಅಭಿಷೇಕ, ಅಲಂಕಾರ ಹಾಗೂ ಪೂಜೆ ನಡೆಯಲಿವೆ ಎಂದು ಅಲ್ಲಿನ ಅರ್ಚಕರು ಮಾಹಿತಿ ನೀಡಿದ್ದಾರೆ.
ಬರಿಗಣ್ಣಿನಿಂದ ವೀಕ್ಷಿಸಬಹುದಾದ ಗ್ರಹಣ: ನಗರದಲ್ಲಿ ಸಂಜೆ 5.53 ರಿಂದ 6.18 ರವರೆಗೆ ಭಾಗಶಃ ಚಂದ್ರ ಗ್ರಹಣ ಗೋಚರಿಸಬಹುದು. ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತಾರಾಲಯದಿಂದ ಯುಟ್ಯೂಬ್ ಲೈವ್: ವರ್ಷದ ಕೊನೆಯ ಕೊನೆಯ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದ್ದು ಗ್ರಹಣ ವೀಕ್ಷಣೆಗೆ ನಗರದ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಿಲ್ಲ. ಚಂದ್ರೋದಯಕ್ಕೂ ಮೊದಲೇ ಗ್ರಹಣ ಆಗಲಿದ್ದು, ಸುಮಾರು 20 ನಿಮಿಷಗಳ ಕಾಲ ಗೋಚರಿಸಲಿದೆ. ಈ ಬಾರಿ ನೆಹರು ತಾರಾಲಯ ಯೂಟ್ಯೂಬ್ ಲೈವ್ ವ್ಯವಸ್ಥೆ ಮಾಡಿದೆ. ಈ ಸಂದರ್ಭದಲ್ಲಿ ನೇರವಾಗಿ ಆನ್ಲೈನ್ ಮೂಲಕವೇ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಬಹುದು ಎಂದು ತಾರಾಲಯ ತಿಳಿಸಿದೆ.
ಇದನ್ನೂ ಓದಿ: 15 ದಿನಗಳ ಅಂತರದಲ್ಲೇ 2ನೇ ಗ್ರಹಣ: ಇದು ಜಗತ್ತಿಗೆ ಹಾನಿಕಾರಕ - ಜ್ಯೋತಿಷಿ ಹೇಳುವುದೇನು?