ಬೆಂಗಳೂರು: ಇತ್ತೀಚೆಗೆ ಹೃದಯದ ಕವಾಟದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಪ್ರತಿವರ್ಷ ಒಂದು ಸಾವಿರ ಮಕ್ಕಳಲ್ಲಿ ಇಬ್ಬರಿಗೆ ಇಂತಹ ಸಮಸ್ಯೆ ಕಂಡು ಬರುತ್ತದೆ. ಈ ಚಿಕಿತ್ಸೆಗೆ ಹೆಚ್ಚಿನ ವೆಚ್ಚ ತಗಲುತ್ತದೆ ಹಾಗೂ ತಜ್ಞ ವೈದ್ಯರಿಂದ ಮಾತ್ರ ಇದನ್ನು ಸರಿ ಮಾಡಲು ಸಾಧ್ಯವಾದ್ದರಿಂದ ಎಷ್ಟೋ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಆದರೆ ಇಂತಹ ಸಮಸ್ಯೆ ಹೊಂದಿರುವ ಬಾಲಕಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಎಂಡೋಸ್ಕೋಪಿ ಶಸ್ತ್ರ ಚಿಕಿತ್ಸೆ ಮೂಲಕ ಹೃದಯದ ಕವಾಟವನ್ನು ಸರಿಪಡಿಸಿದೆ ಎಂದು ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ. ತಮೀಮ್ ಅಹ್ಮದ್ ತಿಳಿಸಿದರು.
ಹೃದಯದ ಕವಾಟ ಬದಲಾವಣೆ ಮಾಡುವ ಚಿಕಿತ್ಸೆಗಳು ಸಾಮಾನ್ಯ. ಆದರೆ ಎಂಡೋಸ್ಕೋಪಿ ಮೂಲಕ ಹೃದಯದ ಕವಾಟವನ್ನು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಖ್ಯಾತ ಹೃದಯ ತಜ್ಞರಾದ ಡಾ. ತಮೀಮ್ ಅಹ್ಮದ್ ಮತ್ತು ಡಾ. ಇಂತಿಕಾಬ್ ಆಲಂ, ಅನಸ್ತೇಶಿಯಾ ತಜ್ಞೆ ಡಾ. ಪದ್ಮ ಯಶಸ್ವಿಯಾಗಿ ಸರಿಪಡಿಸಿದ್ದಾರೆ.
ಎರಡು ಇಂಚಿನಷ್ಟು ಹೃದಯ ಭಾಗವನ್ನು ಕೊರೆದು ಎಂಡೋಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವಾಲ್ವ್ ದುರಸ್ತಿಗೆ ಸಾಧನಗಳ ಬದಲು ಬಟ್ಟೆಯಂತಹ ವಸ್ತು ಬಳಸಲಾಗಿದೆ. ಇಂತಹ ವೈದ್ಯಕೀಯ ಸಾಧನಗಳಿಗೆ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ ಈ ಚಿಕೆತ್ಸೆಯನ್ನು ಉಚಿತವಾಗಿ ಸಪ್ತಗಿರಿ ಆಸ್ಪತ್ರೆ ಮಾಡಿಕೊಟ್ಟಿದೆ.
ಹೃದಯ ಕವಾಟದ ದುರಸ್ತಿಗೆ ಸಾಮಾನ್ಯವಾಗಿ ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ಆದರೆ ಎಂಡೋಸ್ಕೋಪಿ ಮೂಲಕ ನಡೆಸಿದ ಚಿಕಿತ್ಸೆಯಿಂದ ವೆಚ್ಚ ಕಡಿಮೆ. ಅಲ್ಲದೆ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ರಕ್ತ ನಷ್ಟವಾಗಲಿದ್ದು, ಆಸ್ಪತ್ರೆಯಿಂದ ಬೇಗ ಡಿಸ್ಚಾರ್ಜ್ ಆಗಿ ಸಾಮಾನ್ಯರಂತೆ ಜೀವನ ನಡೆಸಲು ಇದರಿಂದ ಸಹಾಯವಾಗುತ್ತದೆ ಎಂದರು.
ಸಾಮಾನ್ಯವಾಗಿ ಹೃದಯ ಕವಾಟ ಶಸ್ತ್ರ ಚಕಿತ್ಸೆಯನ್ನು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮೂಲಕ ನಡೆಸಲಾಗುತ್ತದೆ. ಎದೆಯ ಮೂಳೆಗಳನ್ನು ಕತ್ತರಿಸಿ ನಡೆಸುವ ಶಸ್ತ್ರಚಿಕಿತ್ಸೆ ಅತ್ಯಂತ ದುಬಾರಿಯೂ ಹೌದು. ಹೃದಯ ಕವಾಟದ ದರ ಹಲವು ಲಕ್ಷ ರೂ.ಗಳವರೆಗೆ ಇದೆ. ಜೊತೆಗೆ ಇಂತಹ ಚಿಕಿತ್ಸೆ ಅಪಾಯಕಾರಿಯೂ ಹೌದು. ಮೆದುಳಿನ ಒಳಗಡೆ ರಕ್ತ ಸ್ರವಿಸುವ, ಹಠಾತ್ ಮರಣ ಸಂಭವಿಸುವ, ಹೃದಯ ಕವಾಟ ಜರಗುವ ಸಾಧ್ಯತೆಯೂ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.