ಬೆಂಗಳೂರು: ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಧಿಸಿರುವ ನಿರ್ಬಂಧವನ್ನು ತೆರವು ಮಾಡುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ತಮಿಳುನಾಡಿನ ಗಡಿ ಭಾಗವಾದ ಹೊಸೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಕಾರ್ಮಿಕರ ಸಂಚಾರಕ್ಕೆ ರಾಜ್ಯದ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದನ್ನು ಪ್ರಶ್ನಿಸಿ ವಕೀಲೆ ಇಂದಿರಾ ಪ್ರಿಯದರ್ಶಿನಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಹೊರ ರಾಜ್ಯದ ಜನರಿಗೆ ಕರ್ನಾಟಕ ಪ್ರವೇಶಿಸಲು ಷರತ್ತುಗಳನ್ನು ವಿಧಿಸಿ ಹೊರಡಿಸಿರುವ ಎಸ್ಒಪಿಯನ್ನು ಹಿಂಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಎಸ್ಒಪಿ ಹಿಂಪಡೆದ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು. ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರವೇ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿರುವಾಗ ರಾಜ್ಯ ಸರ್ಕಾರ ಷರತ್ತುಗಳನ್ನು ವಿಧಿಸಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದ ಪೀಠ, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು.
ಅರ್ಜಿದಾರರ ಮನವಿ:
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರು ಸೇವಾಸಿಂಧು ವೆಬ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಕೆಲಸ ಮಾಡುವ ಸಂಸ್ಥೆಯಿಂದ ವೃತ್ತಿ ನಿರ್ವಹಿಸುತ್ತಿರುವ ಕುರಿತು ಪತ್ರ ತರಬೇಕು. ನಂತರ ಇ-ಪಾಸ್ ಪಡೆದು ರಾಜ್ಯ ಪ್ರವೇಶಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ಎಸ್ಒಪಿ ಜಾರಿ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ದಿನಗೂಲಿ ನೌಕರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸರ್ಕಾರದ ಎಸ್ಒಪಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.