ಆನೇಕಲ್: ಅತ್ತಿಬೆಲೆ ಪಟಾಕಿ ದುರಂತ ನಡೆದ ಸ್ಥಳಕ್ಕೆ ಇಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವಾರು ಕಟ್ಟುನಿಟ್ಟಾದ ಸೂಚನೆ ನೀಡಿದರು.
ಈ ಘಟನೆ ದುರಾದೃಷ್ಟಕರ. ಬರೀ ಮಾರಾಟ ಪರವಾನಗಿ ಲೈಸನ್ಸ್ ಪಡೆದು ಭಾರಿ ಪ್ರಮಾಣದ ಪಟಾಕಿ ಸಂಗ್ರಹ ಮಾಡಲಾಗಿತ್ತು. ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದ್ದಲ್ಲಿ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಜನನಿಬಿಡ ಪ್ರದೇಶದಲ್ಲಿ ಗೋದಾಮು ನಿರ್ಮಿಸಿ ಪಟಾಕಿ ಶೇಖರಣೆಯ ಅಕ್ರಮಗಳನ್ನು ತಡೆಯಲು ಸ್ಥಳೀಯರೂ ಸಹ ಕೈ ಜೋಡಿಸಬೇಕು. ಇಲ್ಲಿಯವರೆಗೆ ಯಾರೂ ಈ ಘಟನೆ ಬಗ್ಗೆ ದೂರು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಹದಿನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನೂ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಜನಸಾಮಾನ್ಯರು, ವರ್ತಕರು ಹಬ್ಬದ ಸೀಜನ್ಗಳಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಕ್ಕಪಕ್ಕದ ಅಂಗಡಿಯವರನ್ನು ಕರೆದು ಕೇಳಿದರೆ ಸರಿಯಾದ ಉತ್ತರ ನೀಡುತ್ತಿಲ್ಲ. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿದರು.
ಈ ವಿಚಾರವನ್ನು ಸೀರಿಯಸ್ ಆಗಿ ಪರಿಗಣಿಸಿದ್ದೇವೆ. ಇದರಲ್ಲಿ ಅಧಿಕಾರಿಗಳ ಲೋಪ ಇರುವುದು ಎದ್ದು ಕಾಣುತ್ತಿದೆ. ಇಲ್ಲಿಗೆ ಬಂದಾಗ ಅಧಿಕಾರಿಗಳಿಂದ ಹಲವು ಮಾಹಿತಿ ಪಡೆದುಕೊಂಡಿದ್ದೇವೆ. ರಾಜ್ಯದಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಸಂಗ್ರಹಕ್ಕೆ ಮುಂದಾದ ಲೋಕಾಯುಕ್ತರು, ಗೊತ್ತಿಲ್ಲ ಎಂದ್ರೆ ನಿಮಗೂ ಸಮಸ್ಯೆಯಾಗುತ್ತದೆ. ಎಷ್ಟು ವರ್ಷಗಳಿಂದ ಪಟಾಕಿ ಸಂಗ್ರಹ ಯಾವ ಅಂಗಡಿ, ಗೋದಾಮುಗಳಲ್ಲಿ ಪಟಾಕಿ ಸಂಗ್ರಹ ಮಾಡುತ್ತಿದ್ದರು. ಪಟಾಕಿ ಬಾಕ್ಸ್ಗಳ ಜೊತೆ ಕಾಟನ್ ಬಾಕ್ಸ್ ತರುತ್ತಿದ್ದರಾ?. ಗಣೇಶ ಮತ್ತು ದೀಪಾವಳಿ ಸಂದರ್ಭದಲ್ಲಿ ಚೀಟಿಗಳಿಗೆ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಗಿಫ್ಟ್ ಬಾಕ್ಸ್ ಪ್ಯಾಕ್ ಸಿದ್ದಪಡಿಸುತ್ತಿದ್ದಾರಾ? ಹಬ್ಬದ ಸಂದರ್ಭದಲ್ಲಿ ಮಾತ್ರ ವಹಿವಾಟು ನಡೆಯುತ್ತಿತ್ತಾ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡರು.
ರಾಜ್ಯದಲ್ಲಿ ಪಟಾಕಿ ಮಳಿಗೆ ಗೋದಾಮು ಪರಿಶೀಲಿಸಿ ತುಂಬಾ ಸ್ಟಾಕ್ ಇರ್ತಿತ್ತಾ?, ಜನಜಂಗುಳಿ ಜಾಸ್ತಿ ಇರ್ತಿತ್ತಾ, ಎಷ್ಟು ಜನ ಕಾರ್ಮಿಕರು ಇರ್ತಿದ್ರು? ಬೆಂಕಿ ಅವಘಡ ಸಂಭವಿಸಿದಾಗ ಪರಿಸ್ಥಿತಿ ಹೇಗಿತ್ತು? ಬಹುತೇಕ ಎಲ್ಲ ಗೋದಾಮುಗಳ ಪರಿಶೀಲನೆ ನಡೆದಿದೆ. ರಾಜ್ಯಾದ್ಯಂತ ಪಟಾಕಿ ಗೋದಾಮುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಅದರಲ್ಲಿ ಅಕ್ರಮ ಪಟಾಕಿ ಸಂಗ್ರಹ ಮಾಡುವವರ ವಿರುದ್ಧ ಈಗಾಗಲೇ ಐದಾರು ಕೇಸು ದಾಖಲಾಗಿದೆ ಎಂದು ಮಾಧ್ಯಮವದವರಿಗೆ ತಿಳಿಸಿದರು.
ಹಬ್ಬ ಮುಗಿದಿಲ್ಲ, ಆಗಲೇ ಅನಾಹುತ ಆಗಿದೆ. ಕೇವಲ ನಾಲ್ಕು ದಿನ ಕೆಲಸ ಮಾಡಿದರೆ ಸಾಲದು. ನಿತ್ಯ ನಿರಂತರವಾಗಿ ಕಾರ್ಯಾಚರಣೆ ಮಾಡಬೇಕು. ಪೊಲೀಸ್, ರೆವಿನ್ಯೂ ಮತ್ತು ಫೈರ್ ಇಲಾಖೆ ಜಂಟಿ ತಪಾಸಣೆ ಮಾಡಬೇಕು. ಪಟಾಕಿ ಅಕ್ರಮ ದಾಸ್ತಾನು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸೂಚಿಸಿದರು.
ಪಟಾಕಿ ಮಾರಾಟ ಮಳಿಗೆ ಮೇಲೆ ತಾಲೂಕು ಆಡಳಿತ ದಾಳಿ: ಬೆಂಗಳೂರು ಗ್ರಾಮಾಂತರ ಎಸ್ಪಿ ಎಂ.ಎಲ್.ಪುರುಷೋತ್ತಮ್, ಡಿವೈಎಸ್ಪಿ ಮೋಹನ ಕುಮಾರ್ ನೇತೃತ್ವದಲ್ಲಿ ಹದಿನೈದಕ್ಕೂ ಹೆಚ್ಚು ಪಟಾಕಿ ಮಳಿಗೆಗಳಲ್ಲಿ ಪಟಾಕಿಗಳನ್ನು ತೆರವುಗೊಳಿಸಿ ಬೀಗ ಜಡಿದು ಕ್ರಮ ತೆಗೆದುಕೊಂಡರು.
ಈಗಾಗಲೇ ಸಿಐಡಿ ಡಿಜಿ, ಐಜಿ ಹೀಗೆ ಉನ್ನತ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಹಸಿರು ಪಟಾಕಿ ಮಾತ್ರ ಅವಕಾಶ ನೀಡಲಾಗಿದೆ. ಈ ಆದೇಶದ ಬೆನ್ನಲ್ಲೇ ಆನೇಕಲ್ ತಹಸೀಲ್ದಾರ್ ಶಿವಪ್ಪ ಲಮ್ಹಾಣಿ, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತಲಾಷ್ ಮಾಡಿ ಪಟಾಕಿ ಮಾರಾಟ ಮಳಿಗೆಗಳಿಗೆ ಬೀಗ ಜಡಿದಿದ್ದಾರೆ.
ಇದನ್ನೂಓದಿ: ಹಾವೇರಿ: ಪಟಾಕಿ ಗೋದಾಮಿನ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ