ಬೆಂಗಳೂರು : ಲೋಕಾಯುಕ್ತ ಸರ್ವ ಸ್ವತಂತ್ರವಾಗಿರುವ ಸಂಸ್ಥೆ. ಲಂಚ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಲಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದೇ ಭ್ರಷ್ಟಾಚಾರವನ್ನು ನಿಗ್ರಹಿಸಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಶಾಸಕ ಮಾಡಾಳು ವಿರೂಪಾಕ್ಷ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದ ಘಟನೆ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ದಾಳಿ ವಿಚಾರದಲ್ಲಿ ನಾನು ಇಷ್ಟೇ ಹೇಳಬಯಸುತ್ತೇನೆ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದೇ ಮುಕ್ತವಾಗಿ ಭ್ರಷ್ಟಾಚಾರ ನಿಗ್ರಹಿಸಲು ಎಂದರು. ಇದೇ ವೇಳೆ ಕಾಂಗ್ರೆಸ್ ಮುಚ್ಚಿಹಾಕಿದ್ದ ಕೇಸ್‌ಗಳ ತನಿಖೆ ಮಾಡುವುದಾಗಿಯೂ ಅವರು ತಿಳಿಸಿದರು.
ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಏನೇನು ಮಾಹಿತಿ ಸಿಕ್ಕಿದೆಯೋ, ಹಣ ಸಿಕ್ಕಿದೆಯೋ ಎಲ್ಲವೂ ಕೂಡ ಲೋಕಾಯುಕ್ತರ ವಶದಲ್ಲಿದೆ. ಅವರು ಮುಕ್ತವಾಗಿ, ನ್ಯಾಯ ಸಮ್ಮತವಾಗಿ ತನಿಖೆ ಮಾಡಲಿ. ಮತ್ತು ಇದು ಯಾರಿಗೆ ಸೇರಿದ ಹಣ ಯಾವುದಕ್ಕಾಗಿ ತರಲಾಗಿತ್ತು ಎನ್ನುವ ಸತ್ಯ ಹೊರಬರಬೇಕು ಎನ್ನುವುದೇ ನಮ್ಮ ಉದ್ದೇಶ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಕೇಸ್ ಓಪನ್: ಕಾಂಗ್ರೆಸ್ ಶಾಸಕರ ಹಾಗೂ ಅವರ ಮಂತ್ರಿಗಳ ಮೇಲೆ ಹಲವಾರು ಆರೋಪವಿತ್ತು. ಎಸಿಬಿ ಇದ್ದುದಕ್ಕೆ ಅವರು ಕೇಸ್ ಮುಚ್ಚಿ ಹಾಕಿದ್ದರು. ಈಗ ಲೋಕಾಯುಕ್ತ ತನಿಖೆಯಾದಾಗ ಅವರದ್ದೂ ಸಹ ಹೊರಗಡೆ ಬರುತ್ತದೆ. ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿಹಾಕಿರೋದಕ್ಕೆ ಇದೇ ಸಾಕ್ಷಿ. ಇವೆಲ್ಲ ಬಹಿರಂಗವಾಗುತ್ತವೆ ಎಂದರು.
ಬಹಳ ಸ್ಪಷ್ಟವಾಗಿ ಅವರದ್ದೇ ಪಕ್ಷದ ಜಾರ್ಜ್ ಅವರು ವಿಧಾನಸಭೆಯಲ್ಲಿ ಎಸಿಬಿನೇ ಮುಂದುವರಿಸಿ ಅಂತ ಹೇಳುತ್ತಾರೆ. ಅವರು ಯಾರ ಪರವಾಗಿದ್ದಾರೆ. ಈಗ ಈ ಘಟನೆ ಇಟ್ಟುಕೊಂಡು ತಾವು ದೊಡ್ಡ ಸ್ವಚ್ಛ ಪಕ್ಷ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವರು ಬಹಳ ಹಿಂದೆಯೂ ಭ್ರಷ್ಟಾಚಾರ ಮಾಡಿದ್ದಾರೆ. ಹಲವಾರು ಜನರ ಮೇಲೆ ಕೇಸ್ ಹಾಕಲಾಗಿದ್ದು ತನಿಖೆ ಸಹ ಆಗುತ್ತಿದೆ. ಅವರು ಏನು ಮುಚ್ಚಿ ಹಾಕಿದ್ದರೋ ಅವೆಲ್ಲವನ್ನೂ ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸುತ್ತೇನೆ. ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದು ಕಾಂಗ್ರೆಸ್‌ಗೆ ಟಕ್ಕರ್ ಕೊಟ್ಟರು.
ಅಮಿತ್ ಶಾ ಈಗಾಗಲೇ ಬೀದರ್‌ಗೆ ಬಂದಿದ್ದು, ಇಂದು ಬೆಳಗ್ಗೆ ವಿಜಯ ಸಂಕಲ್ಪ ಯಾತ್ರೆ ಉದ್ಘಾಟನೆ ಮಾಡಿದ್ದಾರೆ. ನಂತರ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಕೇಂದ್ರ ಗೃಹ ಸಚಿವರು, ನಂತರ ದೇವನಹಳ್ಳಿ ಕಾರ್ಯಕ್ರಮಕ್ಕೆ ಆಗಮಿಸಿ, ರಥಯಾತ್ರೆಗೆ ಚಾಲನೆ ನೀಡಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ :ಪ್ರಶಾಂತ್ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂಪಾಯಿ ಹಣ ಪತ್ತೆ!