ಆನೇಕಲ್: ಕೊರೊನಾ ವೈರಸ್ ವ್ಯಾಪಕವಾಗಿದ್ದು ತುಸು ಚೇತರಿಕೆ ಕಂಡರೂ ಸರ್ಕಾರ ತಿಂಗಳುಗಟ್ಟಲೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ರೈತರು ಬೆಳೆದ ಹೂ, ತರಕಾರಿ ಹಣ್ಣುಗಳಿಗೆ ಮಾರುಕಟ್ಟೆ ಇಲ್ಲದಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಷ್ಟ ಉಂಟಾಗಿದ್ದು, ತಾವು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ.
ಕಟಾವಿಗೆ ಬಂದ ಟೊಮ್ಯಾಟೊ ಫಸಲನ್ನು ಮಣ್ಣಿನ ಗುಂಡಿಗೆಸೆದರೆ, ನಳನಳಿಸುತ್ತಿರುವ ಸೇವಂತಿ ಹೂವನ್ನು ನಾಶ ಮಾಡುತ್ತಿರುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿದೆ. ಬೆಂಗಳೂರು ಹೊರವಲಯದ ರಾಗಿ ಕಣಜ ಆನೇಕಲ್‌ನ ರೈತರು ರಾಗಿಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಇದರ ನಡುವೆ ಬೆಳೆಗಾರರು ತೋಟಗಾರಿಕಾ ಬೆಳೆಗಳನ್ನೂ ಬೆಳೆಯುತ್ತಾರೆ. ಆದ್ರೆ ಕೊರೊನಾ ಲಾಕ್ ಡೌನ್ನಿಂದ ಹೂ ಮತ್ತು ತರಕಾರಿ ಬೆಳೆದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೀನ್ಸ್, ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನು ಖರೀದಿಸುವವರಿಲ್ಲದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಕೃಷಿಗೆ ಹಾಕಿರುವ ಬಂಡವಾಳವೂ ವಾಪಸ್ ಬರುತ್ತಿಲ್ಲ ಎನ್ನುತ್ತಿದ್ದಾರೆ ರೈತರು.
ಲಾಕ್‌ಡೌನ್ ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಲಾಭ ಬರುತ್ತಿತ್ತು. ಆದರೆ ಕೊರೊನಾ ಬದುಕನ್ನು ಕಸಿದುಕೊಂಡಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೀನ್ಸ್ ಮತ್ತು ಸೇವಂತಿ ಹೂ ಬೆಳೆಯಲಾಗಿದೆ. ಉತ್ತಮ ಫಸಲು ಬಂದಿದೆ. ಆದ್ರೆ ಮಾರುಕಟ್ಟೆ ಇಲ್ಲದೆ, ರೈತರ ಫಸಲನ್ನು ಕೇಳುವವರು ಇಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ಸೇವಂತಿ ಹೂ ಗಿಡಗಳನ್ನು ಕಿತ್ತೆಸೆಯಲಾಗುತ್ತಿದೆ ಎಂದು ರೈತ ಮಂಜುನಾಥ್ ತಿಳಿಸಿದ್ದಾರೆ.