ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್‌ಡೌನ್ ಸಡಿಲಿಕೆಯ ಬಳಿಕ ಸರ್ಕಾರಿ ಕಚೇರಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಶಕ್ತಿ ಕೇಂದ್ರವಾದ ವಿಧಾನಸೌಧ ಹಾಗೂ ವಿಕಾಸಸೌಧ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ.
ಕಳೆದ ಎರಡು ತಿಂಗಳಿಂದ ಕೋವಿಡ್-19 ಲಾಕ್‌ಡೌನ್ ರಾಜ್ಯದ ಆಡಳಿತ ವರ್ಗವನ್ನ ಬಹುತೇಕ ಸ್ಥಗಿತಗೊಳಿಸಿತ್ತು. ಅಗತ್ಯ ಸೇವೆಗಳನ್ನು ಪೂರೈಸುವ ಇಲಾಖೆಗಳನ್ನು ಬಿಟ್ಟರೆ ಉಳಿದೆಲ್ಲಾ ಇಲಾಖಾ ಕಚೇರಿಗಳ ಕಾರ್ಯ ಸ್ಥಗಿತವಾಗಿತ್ತು.
ಲಾಕ್‌ಡೌನ್ 3.0 ಸ್ವಲ್ಪ ಮಟ್ಟಿಗೆ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯನ್ನು ಸಡಿಲಗೊಳಿಸಲಾಯಿತು. ಅಗತ್ಯ ಸೇವೆಗಳ ಹೊರತಾದ ಇಲಾಖೆಗಳ 33ರಷ್ಟು ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಯಿತು. ಇದೀಗ ಲಾಕ್‌ಡೌನ್ 4.O ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ಶೇ.90ರಷ್ಟು ಸಿಬ್ಬಂದಿ ಹಾಜರಾತಿ
ಲಾಕ್‌ಡೌನ್ 4.O ಅವಧಿಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಸಿಬ್ಬಂದಿ ಸಂಚರಿಸಲು ಬಿಎಂಟಿಸಿ ವಾಹನಗಳ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಸೇರಿದಂತೆ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಒಟ್ಟು ಐದು ಸಾವಿರ ನೌಕರರು ಇದ್ದಾರೆ. ಶೇ.100ರಷ್ಟು ಸಿಬ್ಬಂದಿಯೊಂದಿಗೆ ಇಲಾಖೆ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿ ಮೂರು ದಿನಗಳು ಕಳೆದಿವೆ. ಆದ್ರೆ ಸುಮಾರು 90ರಷ್ಟು ಸಿಬ್ಬಂದಿ ಕಚೇರಿಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕೆಲವರಿಗೆ ಸಚಿವಾಲಯದ ಕಚೇರಿಗಳಿಗೆ ಬರಲು ಕಷ್ಟವಾಗುತ್ತಿದೆ ಎಂದು ರಾಜ್ಯ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕಚೇರಿಗಳಲ್ಲಿ ಅಸಮರ್ಪಕ ಸ್ಯಾನಿಟೈಸಿಂಗ್
ಮಾರ್ಗಸೂಚಿ ಪ್ರಕಾರ ಸರ್ಕಾರಿ ಕಚೇರಿಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಬೇಕು. ಆದರೆ ಸಚಿವಾಲಯದ ಕಚೇರಿಗಳಲ್ಲಿ ಸಮರ್ಪಕವಾಗಿ ಸ್ಯಾನಿಟೈಸಿಂಗ್ ಮಾಡಲಾಗುತ್ತಿಲ್ಲ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ ಆರೋಪಿಸಿದ್ದಾರೆ. ಬಹುತೇಕ ಕಚೇರಿಗಳ ದ್ವಾರಗಳಲ್ಲಿ ಸಿಬ್ಬಂದಿಯೇ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಈ ಸಂಬಂಧ ನೌಕರರ ಸಂಘ ಸೂಕ್ತ ಮುಂಜಾಗ್ರತಾ ಕ್ರಮ ಹಾಗೂ ಸಚಿವಾಲಯದ ಪ್ರಮುಖ ದ್ವಾರಗಳಲ್ಲಿ ಸ್ಯಾನಿಟೈಸಿಂಗ್ ಟನಲ್ ಅಳವಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದೆ.
ನಿಧಾನವಾಗಿ ಸರ್ಕಾರಿ ಕಚೇರಿಗಳ ಕಾರ್ಯಚಟುವಟಿಕೆ ಸಹಜ ಸ್ಥಿತಿಗೆ ಬರುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಂತೆ ಸಚಿವಾಲಯ ನೌಕರರ ಸಂಘ ಒತ್ತಾಯಿಸಿದೆ.