ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಹೋಮ್ ಕ್ವಾರಂಟೈನ್ ಮನೆಗಳಿವೆ. ಈ ಮನೆಗಳಿಂದ ಪ್ರತಿದಿನ ಕಸ ಸಂಗ್ರಹಣೆ ಮಾಡಿ, ವಿಲೇವಾರಿ ಮಾಡುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿದೆ. ಇದರಿಂದ ಅವರೂ ಕೂಡಾ ಕೊರೊನಾ ಸೋಂಕು ಹರಡುವ ಭೀತಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರ ಸುರಕ್ಷತೆಗೆ ಬಿಬಿಎಂಪಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಈಗ ಸದ್ಯಕ್ಕೆ ವಾರಕ್ಕೊಮ್ಮೆ ಮಾತ್ರ ಮಾಸ್ಕ್, ಕೈಗವಸು ನೀಡಲಾಗುತ್ತಿದ್ದು, ಪ್ರತಿದಿನ ಮಾಸ್ಕ್, ಕೈಗವಸು ನೀಡಿ ಅನ್ನೋದು ಪೌರಕಾರ್ಮಿಕರ ಆಗ್ರಹವಾಗಿದೆ. ಸಂತೋಷದ ವಿಚಾರವೆಂದರೆ ಪೌರಕಾರ್ಮಿಕರ ಕಾಲೋನಿಗಳಿಗೆ ತೆರಳಿ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡೋಕೆ ಬಿಬಿಎಂಪಿ ಮುಂದಾಗಿದೆ. ಇದರಿಂದ ಪೌರಕಾರ್ಮಿಕರನ್ನು ಸೋಂಕಿನಿಂದ ರಕ್ಷಿಸಲು ಸಹಕಾರಿಯಾಗಿದೆ.
ಚಿತಾಗಾರಗಳಲ್ಲಿ ಇಲ್ಲ ಸೂಕ್ತ ಮುಂಜಾಗ್ರತೆ..!
ಇನ್ನು ಚಿತಾಗಾರಗಳ ವಿಚಾರಕ್ಕೆ ಬರೋದಾದ್ರೆ ಕೊರೊನಾ ಸೋಂಕಿನಿಂದ ಈಗಾಗಲೇ ರಾಜ್ಯದಲ್ಲಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ. ಆದರೆ ಚಿತಾಗಾರ ಅಥವಾ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಏಪ್ರಾನ್, ಮಾಸ್ಕ್, ಶೂ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಕೇವಲ ಸಣ್ಣ ಬಾಟಲಿಯ ಸ್ಯಾನಿಟೈಸರ್, ಮಾಸ್ಕ್, ಕೈಗವಸು ನೀಡಿ ಕೈತೊಳೆದುಕೊಂಡಿದೆ. ಸ್ಮಶಾನಕ್ಕೆ ಬರುವ ಜನರ ಸಂಖ್ಯೆಯಲ್ಲಿ ನಿರ್ಬಂಧಿಸಲಾಗಿದೆಯೇ ಹೊರತು ಉಳಿದ ಯಾವ ಮಾರ್ಗಸೂಚಿಯನ್ನೂ ನೀಡಿಲ್ಲ ಅನ್ನೋದು ರುದ್ರಭೂಮಿ ನೌಕರರ ಮಾತು.
ಕಳಪೆ ಗುಣಮಟ್ಟದ ಮಾಸ್ಕ್, ಪಿಪಿಇ ಕಿಟ್..?
ರಾಜ್ಯ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಆಶಾಕಾರ್ಯಕರ್ತೆಯರಿಗೆ ಸರ್ಕಾರ ಹಾಗೂ ಎನ್ಜಿಒಗಳು ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿದೆ. ಆದರೆ ಇನ್ನೂ ಹಲವೆಡೆ ಪಿಪಿಇ ಕಿಟ್ಗಳ ಕೊರತೆಯಿದೆ. ರಾಜಾಜಿನಗರದ ಇಎಸ್ಐ ಆಸ್ಪತ್ರೆ ಒಳಭಾಗದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಳಪೆ ಗುಣಮಟ್ಟದ ಮಾಸ್ಕ್ ಹಾಗೂ ಪಿಪಿಇ ಕಿಟ್ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದ್ದಾರೆ. ಕೊರೊನಾ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ಇಲ್ಲಿನ ಸಿಬ್ಬಂದಿಯ ಆರೋಪ.