ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುತ್ತಿದ್ದು, ಲಾಕ್ಡೌನ್ ಹಿನ್ನೆಲೆ ನಗರದಲ್ಲಿ ತರಕಾರಿಗೆ ಬೇಡಿಕೆ ಇಲ್ಲದೆ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.
ನಗರದ ಸುತ್ತಮುತ್ತಲ ಮಾಗಡಿ, ಚನ್ನಪಟ್ಟಣ ನೆಲಮಂಗಲ ಹಾಗೂ ಇನ್ನಿತರ ತಾಲೂಕಿನಿಂದ ಪ್ರತಿನಿತ್ಯ ಟನ್ಗಟ್ಟಲೇ ತರಕಾರಿ ನಗರಕ್ಕೆ ಬರುತ್ತದೆ. ಮದುವೆ ಸಮಾರಂಭ ಸೇರಿದಂತೆ ಹೋಟೆಲ್ ಉದ್ಯಮದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ತರಕಾರಿಗೆ ಈಗ ಲಾಕ್ಡೌನ್ ನಿರ್ಬಂಧ ಇರುವ ಕಾರಣ ಬೇಡಿಕೆ ನೆಲ ಕಚ್ಚಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಹೇಳಿದರು.
ಸದ್ಯಕ್ಕೆ ಕೆಲ ಬೀದಿಬದಿ ವ್ಯಾಪಾರಿಗಳು ತರಕಾರಿ-ಹಣ್ಣುಗಳನ್ನು ತಳ್ಳುವ ಗಾಡಿ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಇವರ ವಹಿವಾಟು ಅರ್ಧಕ್ಕೂ ಹೆಚ್ಚು ಇಳಿಕೆ ಆಗಿದೆ. ಇದಲ್ಲದೇ ದಿನನಿತ್ಯ ಖರೀದಿಗೆ ಸರ್ಕಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದು, ಈ ಸಮಯದಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ಕೋವಿಡ್-19 ಲಾಕ್ಡೌನ್ನಿಂದ ಸಂತೆಗಳು ಹಾಗೂ ಮಾರುಕಟ್ಟೆ ಸಂಪೂರ್ಣ ತೆರವು ಮಾಡಿದ್ದು, ಹಣ್ಣು ತರಕಾರಿ ಬೆಳೆಯುವ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ.