ಬೆಂಗಳೂರು: ಚಂದಾಪುರ ಪುರಸಭೆ ವ್ಯಾಪ್ತಿಯ, ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಂತಿರುವ ಹೀಲಲಿಗೆಯ ದೀಪಹಳ್ಳಿ ಸೆೇಂಟ್ ಜೊಸೆಫ್ ಶಾಮಿನಾಡ್ ಅಕಾಡೆಮಿ ಶಾಲೆಯ ಎಲ್ಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಲಾಗಿದೆ. 1ರಿಂದ 5ನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬುದು ಶಿಕ್ಷಣ ಇಲಾಖೆಯ ನಿಯಮ. ಈ ನಿಯಮವನ್ನು ಗಾಳಿಗೆ ತೂರಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಲಾಗಿದೆ. ಸಾರ್ವಜನಿಕರು ಆಕ್ರೋಶಗೊಳ್ಳುವ ಮುನ್ನವೇ ಆನೇಕಲ್ ಬಿಇಓ ಜಯಲಕ್ಷ್ಮಿ ಶಾಲೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿದ್ಯಾರ್ಥಿನಿಯ ತಂದೆ ಈ ಬಗ್ಗೆ ಟ್ವೀಟ್ ಮಾಡಿದ್ದರು. ಟ್ವೀಟ್ಗೆ ಸ್ಪಂದಿಸಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಫೇಲ್ ಮಾಡಿದ ಖಾಸಗಿ ಶಾಲೆಗೆ ತಲೆ ಇರಲಿ, ಹೃದಯವೇ ಇಲ್ಲ ಎಂದು ಮರು ಟ್ವೀಟ್ ಮಾಡಿದ್ದರು. ಮಗಳನ್ನು ಯುಕೆಜಿಯಲ್ಲಿ ಫೇಲ್ ಮಾಡಿದ್ದಾರೆ ಎಂದು ತಂದೆ ಮನೋಜ್ ಬಾದಲ್ ಟ್ವೀಟ್ ಉಲ್ಲೇಖಿಸಿ ಮರು ಸುರೇಶ್ ಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಶಾಲೆ ಆಡಳಿತ ಮಂಡಳಿ ಪ್ರತಿಕ್ರಿಯೆ: ''ಪರೀಕ್ಷೆ ಮಾಡಲಾಗಿತ್ತು. ರೈಮ್ಸ್ ವಿಭಾಗದಲ್ಲಿ 40ಕ್ಕೆ ಕೇವಲ ಐದು ಅಂಕವನ್ನು ಮಗು ಪಡೆದಿದೆ. ಮುಂದಿನ ಭವಿಷ್ಯದ ಕಾರಣಕ್ಕೆ ಸಿ ಗ್ರೇಡ್ ನೀಡಲಾಗಿತ್ತು. ಪೋಷಕರಿಗೆ ನೀಡಿದ ಮಾರ್ಕ್ಸ್ ಕಾರ್ಡ್ನಲ್ಲಿ ಎಲ್ಲಿಯೂ ಕೂಡ ಶಾಲೆಯ ಆಡಳಿತ ಮಂಡಳಿ ಮಗು ಫೇಲ್ ಆಗಿದೆ ಎಂದು ನಮೂದಿಸಿಲ್ಲ. ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮಾಹಿತಿ ಆಧರಿಸಿ ಶಾಲೆಯಿಂದ ಇ-ಮೇಲ್ ಕಳುಹಿಸಲಾಗಿದೆ'' ಎಂದು ಪ್ರಾಂಶುಪಾಲ ಸಾಜು ಹೇಳಿದರು.
ಕ್ಷಮೆ: ''ಈ ಬಗ್ಗೆ ಪೋಷಕರೊಂದಿಗೆ ಮಾತನಾಡಿದ್ದೇವೆ. ಅವರು ಹೊರ ರಾಜ್ಯದಲ್ಲಿರುವುದಾಗಿ ತಿಳಿಸಿದ್ದಾರೆ. ಮಗುವಿನ ಅಂಕವನ್ನು ಆ್ಯಪ್ನಲ್ಲಿ ನೋಡಿದ್ದಾರೆ. ಶೇ 35ರ ಕ್ಕಿಂತ ಕಡಿಮೆ ಬಂದಿದ್ದರಿಂದ ಆ್ಯಪ್ನಲ್ಲಿ ಫೇಲ್ ಎಂದು ತೋರಿಸಿದೆ. ಶಾಲೆಯಿಂದಲೂ ಆ್ಯಪ್ ಕಂಪನಿಗೆ ಪತ್ರ ಬರೆಯಲಾಗಿದೆ. ಆ ಆ್ಯಪ್ ಮಾಡಿದ ಎಡವಟ್ಟಿನಿಂದಾಗಿ ಸಮಸ್ಯೆ ಎದುರಾಗಿದೆ. ಇನ್ನು ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು, ಕ್ಷಮೆಯಿರಲಿ" ಎಂದು ಪ್ರಾಂಶುಪಾಲರು ತಿಳಿಸಿದರು.
ಇದನ್ನೂ ಓದಿ: ಆದಿಯೋಗಿ ಪ್ರತಿಮೆ ನಿರ್ಮಾಣ ಪ್ರಶ್ನಿಸಿದ್ದ ಪಿಐಎಲ್ ವಜಾ