ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಮತ ಬ್ಯಾಂಕ್ ಛಿದ್ರವಾಗಿದೆ. ಇಲ್ಲಿಯವರೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿದ್ದ ವೀರಶೈವ ಲಿಂಗಾಯತ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ, ಕಮಲಕ್ಕೆ ಕೈ ಕೊಟ್ಟಿದೆ.
ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಒಟ್ಟು 34 ಶಾಸಕರು ಗೆಲುವು ಸಾಧಿಸಿದ್ದಾರೆ. 2018 ರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ವೀರಶೈವ ಲಿಂಗಾಯತ ಶಾಸಕರ ಗೆಲುವಿನ ಸಂಖ್ಯೆ ಈಗ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಬಾರಿ ಕಾಂಗ್ರೆಸ್ನಲ್ಲಿ ಕೇವಲ 16 ಜನ ವೀರಶೈವ ಲಿಂಗಾಯತ ಶಾಸಕರು ಗೆದ್ದಿದ್ದರು.
ಬಿಜೆಪಿಯ ಪ್ರಮುಖ ಮತಬ್ಯಾಂಕ್ ಆಗಿದ್ದ ವೀರಶೈವ ಲಿಂಗಾಯತ ಸಮುದಾಯದ ಮತ ಕಬಳಿಸಲು ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಹಾಗು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರ ಒತ್ತಡದ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿತ್ತು. ಟಿಕೆಟ್ ಗಿಟ್ಟಿಸಿಕೊಂಡ ಒಟ್ಟು 46 ಅಭ್ಯರ್ಥಿಗಳಲ್ಲಿ 34 ಜನ ವೀರಶೈವ ಲಿಂಗಾಯತರು ಕಾಂಗ್ರೆಸ್ನಲ್ಲಿ ಶಾಸಕರಾಗಿ ಚುನಾಯಿತರಾಗಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದವರ ಬೆಂಬಲದ ಪಕ್ಷವೆಂದು ಕರೆಸಿಕೊಳ್ಳುತ್ತಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 69 ಜನ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಿತ್ತು. ಇದರಲ್ಲಿ ಕೇವಲ 18 ಜನ ಮಾತ್ರ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದ್ದವರ ಪೈಕಿ 38 ಶಾಸಕರು ಚುನಾಯಿತರಾಗಿದ್ದರು. ಆದರೆ ಈ ಬಾರಿ ಕಳೆದ ಚುನಾವಣೆಯ ಅರ್ಧದಷ್ಟು ಮಾತ್ರ ವೀರಶೈವ ಸಮುದಾಯದ ಅಭ್ಯರ್ಥಿಗಳು ಬಿಜೆಪಿಯಲ್ಲಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಶಾಸಕರು ಆಯ್ಕೆಯಾಗಿರುವ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಲಿಂಗಾಯತ ಸಮುದಾಯವು ಬಿಜೆಪಿಯನ್ನು ಕೈಬಿಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ಶಾಸಕರು ಆಯ್ಕೆಯಾಗುವ ಜೊತೆಗೆ ವೀರಶೈವ ಲಿಂಗಾಯತ ಸಮುದಾಯವು ಇತರ ಜನಾಂಗದ ಅಭ್ಯರ್ಥಿಗಳ ಆಯ್ಕೆಗೂ ತನ್ನ ಕಾಣಿಕೆ ನೀಡಿದೆ.
ವರುಣ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರೂ ಅವರಿಗೆ ಮತ ನೀಡಿದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಹಿಂದುಳಿದ ವರ್ಗಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವರುಣಾದಲ್ಲಿ ವೀರಶೈವ ಲಿಂಗಾಯತ ಸಮುದಾಯ ಬೆಂಬಲಿಸಿರುವುದು ಸಿದ್ದರಾಮಯ್ಯನವರ ಗೆಲುವಿನಿಂದ ಗೊತ್ತಾಗುತ್ತದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ಸಿ.ಟಿ.ರವಿಗೆ ವೀರಶೈವ ಲಿಂಗಾಯತ ಸಮುದಾಯ ಬೆಂಬಲಿಸಿಲ್ಲ. ಈ ಬೆಳವಣಿಗೆಯು ಲಿಂಗಾಯತ ಸಮುದಾಯವು ಬಿಜೆಪಿಯಿಂದ ದೂರವಾಗುತ್ತಿರುವುದನ್ನು ಖಚಿತಪಡಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹಾಗು ಸಮುದಾಯದವರೇ ಆದ ತಮ್ಮಯ್ಯಗೆ ಬೆಂಬಲ ನೀಡಿ ಕಾಂಗ್ರೆಸ್ ಪರ ವಾಲಿರುವುದರ ಸ್ಪಷ್ಟ ಸಂದೇಶವನ್ನು ಲಿಂಗಾಯತ ಸಮುದಾಯ ನೀಡಿದೆ.
ಬಿಜೆಪಿ ಮಾತ್ರವಲ್ಲ, ಜಾತ್ಯತೀತ ಜನತಾದಳ ಪಕ್ಷವನ್ನು ಸಹ ವೀರಶೈವ ಲಿಂಗಾಯತ ಸಮುದಾಯದವರು ಬೆಂಬಲಿಸಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಎಸ್ನಿಂದ ನಾಲ್ವರು ಶಾಸಕರು ಚುನಾಯಿತರಾಗಿದ್ದರೆ ಈ ಸಲ ಕೇವಲ ಇಬ್ಬರು ಶಾಸಕರು ಮಾತ್ರ ಗೆದ್ದಿದ್ದಾರೆ. ಜೆಡಿಎಸ್ 50ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು.
ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಸಚಿವರುಗಳಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್ , ಗೋವಿಂದ ಕಾರಜೋಳ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವಾರು ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲದೆ ಪರಾಭವಗೊಂಡಿರುವುದು ಸಮುದಾಯ ಬಿಜೆಪಿಯನ್ನು ಬೆಂಬಲಿಸದೆ ಅಂತರ ಕಾಯ್ದುಕೊಂಡಿದ್ದರ ದ್ಯೋತಕವಾಗಿದೆ.
ಇದನ್ನೂ ಓದಿ: ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಫೈನಲ್; ನಾಳೆ ಹೊಸ ಸಿಎಂ ಪ್ರಮಾಣ ಸಾಧ್ಯತೆ