ಬೆಂಗಳೂರು: ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಗಡಿ ವಿವಾದದ ಕುರಿತು ವಕೀಲರ ಜೊತೆ ಚರ್ಚಿಸುವ ಜೊತೆಗೆ ಸಮಯಾವಕಾಶ ಸಿಕ್ಕಲ್ಲಿ ರಾಜ್ಯ ರಾಜಕಾರಣದ ಕುರಿತು ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗುವ ಸಾಧ್ಯತೆ ಇದೆ. ಸಮಯ ಕೇಳಿದ್ದೇನೆ, ಅವರಿನ್ನೂ ಸಮಯ ಕೊಟ್ಟಿಲ್ಲ. ಅವರು ಸಮಯ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ನಡ್ಡಾ ನಂತರ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದರು.
ಸುಪ್ರೀಂ ಕೋರ್ಟ್ನಲ್ಲಿ ನವೆಂಬರ್ 30 ರಂದು ಗಡಿ ವಿವಾದ ಕುರಿತ ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ ಪ್ರಕರಣ ಕುರಿತು ನಮ್ಮ ಹಿರಿಯ ವಕೀಲ ಮುಕುಲ್ ರಹೊಟೊಗಿ ಅವರನ್ನು ಭೇಟಿಯಾಗುತ್ತೇನೆ. ರಾಜ್ಯದ ಮಾಹಿತಿ ನೀಡಿ ಚರ್ಚಿಸಲಾಗುತ್ತದೆ ಎಂದರು.
ಸಿದ್ದರಾಮಯ್ಯಗೆ ತಿರುಗೇಟು: ಬಿಜೆಪಿಯವರು ಸಂವಿಧಾನವನ್ನೇ ತಿರುಚಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಕಿಡಿಕಾರಿದ ಸಿಎಂ, ಸಂವಿಧಾನ ತಿದ್ದಿದ್ದು ಕಾಂಗ್ರೆಸ್. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಗಾಳಿ ತೂರಿದ್ದು ಕಾಂಗ್ರೆಸ್, ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಎಲ್ಲರನ್ನು ಜೈಲಿಗೆ ಹಾಕಿದ್ದು ಕಾಂಗ್ರೆಸ್. ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಮಹಾರಾಷ್ಟ್ರ ಮಾಡುತ್ತಿರುವ ತಪ್ಪಿಗೆ ತಕ್ಕ ಉತ್ತರ ನೀಡುವ ಸಮ್ಮೇಳನವಾಗಬೇಕು: ಶಿವರಾಮ್ ಹೆಬ್ಬಾರ್