ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ)ದ ಏಜೆಂಟ್ ಒಬ್ಬರನ್ನು ವಜಾ ಮಾಡಿ ಆದೇಶಿಸಿದ್ದ ಕ್ರಮವನ್ನು ಹೈಕೋರ್ಟ್ ಇತ್ತೀಚೆಗೆ ರದ್ದು ಪಡಿಸಿದೆ. ತಮ್ಮನ್ನು ಏಜೆಂಟ್ ಸ್ಥಾನದಿಂದ ರದ್ದು ಪಡಿಸಿದ್ದ ಕ್ರಮವನ್ನು ಪ್ರಶ್ನಿಸಿ ಸೂತ್ರಂ ಸುರೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಎಲ್ಐಸಿ ನಿಬಂಧನೆಗಳ ಐದನೇ ಪರಿಚ್ಚೇಧದ ಪ್ರಕಾರ ಪ್ರಕ್ರಿಯೆ ಜೀವನಾಡಿಯಿದ್ದಂತೆ ಎಂದು ಹೇಳಿರುವ ನ್ಯಾಯಪೀಠ, ಯಾವುದೇ ಸಿಬ್ಬಂದಿಯನ್ನು ವಜಾ ಆದೇಶ ಹೊರಡಿಸುವ ಮುನ್ನ ನಿರ್ದಿಷ್ಟ ನಿಯಮಾವಳಿ ಇದ್ದರೆ ಅದನ್ನು ಪಾಲನೆ ಮಾಡಬೇಕು. ಅದನ್ನು ಗಾಳಿಗೆ ತೂರಿ ಸಿಬ್ಬಂದಿಯನ್ನು ವಜಾ ಮಾಡುವುದು ಸರಿಯಾದ ಕ್ರಮವಲ್ಲ. ಅಲ್ಲದೇ, ಅರ್ಜಿದಾರರ ವಿಚಾರದಲ್ಲಿ ಕಡ್ಡಾಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ. ಕೊನೆ ಪಕ್ಷ ವಜಾ ಅದೇಶ ಮಾಡುವುದಕ್ಕೂ ಮುನ್ನ ಅವರ ಅಹವಾಲು ಸ್ವೀಕರಿಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಈ ಪ್ರಕರಣದ ವಿಚಾರಣೆ ನಡೆಸಿರುವ ಶಿಸ್ತು ಪ್ರಾಧಿಕಾರಕ್ಕೆ ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಪ್ರಾಧಿಕಾರಕ್ಕೆ ವರ್ಗಾಯಿಸಿ ಅದು ಶೋಕಾಸ್ ನೋಟಿಸ್ ಹಂತದಿಂದ ಹೊಸದಾಗಿ ವಿಚಾರಣೆ ನಡೆಸಬೇಕು, ನಿಯಮಗಳಲ್ಲಿ ಉಲ್ಲೇಖಿಸಿರುವ ಎಲ್ಲ ಪ್ರಕ್ರಿಯೆಗಳನ್ನು ಕಾನೂನು ರೀತಿಯಲ್ಲಿ ಅನುಸರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ಜೊತೆಗೆ, ಅರ್ಜಿದಾರರು ನವೀಕರಣ, ಕಮಿಷನ್ ಸೇರಿದಂತೆ ಎಲ್ಲ ಅರ್ಹ ಭತ್ಯೆಗಳನ್ನೂ ಪಡೆಯಲು ಸಂಪೂರ್ಣ ಅರ್ಹರಿದ್ದಾರೆ. ಇತರ ಭತ್ಯೆಗಳು ಹೊಸದಾಗಿ ವಿಚಾರಣೆ ನಡೆಯುವುದರ ಮೇಲೆ ಅವಲಂಬಿಸಿದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? ಬೆಂಗಳೂರು ನಗರದ ನಿವಾಸಿಯಾಗಿರುವ ಅರ್ಜಿದಾರರು ಸುರೇಶ್ ಸುತ್ರಂ ಅವರು ಮತ್ತೊಂದು ಕಂಪನಿಯಾದ ವಿಕ್ರಂ ಇನ್ವೆಸ್ಟ್ಮೆಂಟ್ನಲ್ಲಿ ತಾವು ಹಾಗೂ ವಿವಿಧ ಗ್ರಾಹಕರಿಂದ ಬಂಡವಾಳ ಹೂಡಿಕೆ ಮಾಡುವಂತೆ ಮಾಡಿದ್ದರು. ಸುಮಾರು 800 ಜನರಿಂದ ಬಂಡವಾಳ ಹೂಡಿಕೆ ಮಾಡಿಸಿದ್ದರು. ಈ ಸಂಬಂಧ ವಿಕ್ರಂ ಇನ್ವೆಸ್ಟ್ ಮೆಂಟ್ ವಿರುದ್ಧ 2018ರಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇದೇ ಸಂಸ್ಥೆಯ ಅಗರಬತ್ತಿ ಕಂಪನಿ ಮತ್ತು ಎ.ಆರ್. ಬಾಲಾಜಿ ಅವರಿಂದ ಆದ 11.7 ಕೋಟಿ ನಷ್ಟಕ್ಕೂ ಅರ್ಜಿದಾರರಿಗೂ ಸಂಬಂಧ ಇಲ್ಲ.
ವಿಕ್ರಂ ಹೂಡಿಕೆ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪ ಪಟ್ಟಿಯೂ ಸಲ್ಲಿಕೆಯಾಗಿಲ್ಲ, ಅಲ್ಲದೇ, ಅದಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ಇದೆ. ಆದರೂ ಎಲ್ಐಸಿಯ ಶಿಸ್ತು ಪ್ರಾಧಿಕಾರ ತಮ್ಮನ್ನು ಏಜೆನ್ಸಿ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ವಿವರಿಸಿದ್ದರು. ಅಲ್ಲದೇ, ಎಲ್ಐಸಿ ಶಿಸ್ತು ಪ್ರಾಧಿಕಾರದ ಆದೇಶವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಎಲ್ಐಸಿ ಪರ ವಕೀಲರು, ನ್ಯಾಯಾಲಯದಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಎಲ್ಐಸಿ, ಅರ್ಜಿದಾರರು ಸುಮಾರು 800ಕ್ಕೂ ಅಧಿಕ ಜನರಿಂದ ವಿಕ್ರಂ ಇನ್ವೆಸ್ಟ್ಮೆಂಟ್ನಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಆ ಹಣ ಯಾರಿಗೂ ವಾಪಸ್ ಬಂದಿಲ್ಲ. ಇದು ನಿಯಮದ ಪ್ರಕಾರ ದುರ್ನಡತೆಯಾಗಲಿದೆ. ಹೀಗಾಗಿ ಅರ್ಜಿದಾರರನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಮಗುವಿನ ಬೆಳವಣಿಗೆಗೆ ತಾತ ಅಜ್ಜಿಯ ಪ್ರೀತಿ ಅತ್ಯಗತ್ಯ, ಒಬ್ಬಂಟಿ ತಂದೆಯಿಂದ ಅದು ಸಿಗಲ್ಲ: ಹೈಕೋರ್ಟ್ ಅಭಿಪ್ರಾಯ