ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಸೋತ ಅಭ್ಯರ್ಥಿಗಳಿಗೆ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರದ ಮೂಲಕ ಧೈರ್ಯ, ಆತ್ಮವಿಶ್ವಾಸ ಹೇಳಿದ್ದಾರೆ. ಏಳು-ಬೀಳು ಸಹಜ, ಮುಂದಿನ ದಿನದಲ್ಲಿ ಧೃತಿಗೆಡದೆ ಒಟ್ಟಾಗಿ ಸೇರಿ ಮುಂಬರುವ ಚುನಾವಣೆಗಳನ್ನು ಸಂಘರ್ಷವೆಂದು ಕೈಗೆತ್ತಿಕೊಂಡು ಹೋರಾಟ ನಡೆಸೋಣ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.
ಗೌಡರ ಪತ್ರದ ಸಂಪೂರ್ಣ ಸಾರಾಂಶ: ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಪಕ್ಷ ಮತ್ತು ಅದರ ಅಭ್ಯರ್ಥಿಗಳಿಗೆ ಏಳು-ಬೀಳುಗಳು ಸಾಮಾನ್ಯ. ಪಕ್ಷಕ್ಕೆ ಸಿಕ್ಕ ಫಲಿತಾಂಶದಿಂದ ಧೃತಿಗೆಟ್ಟು ಎದೆಗುಂದಬಾರದು. ಇಂತಹ ಹಲವಾರು ಏಳು-ಬೀಳುಗಳನ್ನು ಆರು ದಶಕಗಳ ರಾಜಕೀಯ ಜೀವನದಲ್ಲಿ ಕಂಡಿದ್ದೇವೆ, ಅನುಭವಿಸಿದ್ದೇನೆ.
1989 ರ ಚುನಾವಣೆಯಲ್ಲಿ ಪಕ್ಷವು ಕೇವಲ 2 ಸ್ಥಾನಗಳಿಸಿದ್ದುಂಟು. 1994 ರಲ್ಲಿ ರಾಜ್ಯದ ಜನತೆಯ ಆರ್ಶೀವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಸನ್ನಿವೇಶ ಲಭಿಸಿತು. ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತ ಫಲಿತಾಂಶವನ್ನು ವಿಮರ್ಶಿಸಲು ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಸಭೆಯನ್ನು ಮುಂದಿನ ವಾರದಲ್ಲಿ ಆಯೋಜಿಸುವಂತೆ ರಾಜ್ಯಾಧ್ಯಕ್ಷರಿಗೆ ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಈ ಸಭೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮುಕ್ತವಾದ ಚರ್ಚೆ ನಡೆಸೋಣ ಮತ್ತು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳೋಣ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್; 20ಕ್ಕೆ ಪ್ರಮಾಣ ವಚನ
ಹೀಗಾಗಿ ಧೃತಿಗೆಡದೆ ನಾವೆಲ್ಲರೂ ಒಟ್ಟಾರಿ ಸೇರಿ ಪಕ್ಷವನ್ನು ಸಂಘಟಿಸಿ ಮುನ್ನಡೆಸೋಣ. ಮುಂಬರುವ ಪಂಚಾಯತ್ ರಾಜ್ ಸಂಸ್ಥೆಗಳ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಂಘರ್ಷವೆಂದು ಕೈಗೆತ್ತಿಕೊಂಡು ಹೋರಾಟ ನಡೆಸೋಣ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷವನ್ನು ಗೆಲ್ಲಿಸಲು ಸಾಕಷ್ಟು ಶ್ರಮ ಹಾಕಿದ್ದರು.
ಜನತಾ ಪರ್ವ, ಜಲಧಾರೆ, ಪಂಚರತ್ನ ರಥಯಾತ್ರೆ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ನೂರಾರು ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನರು ಸೇರಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರ ಕನಸಿನ ಯೋಜನೆಗಳಿಗೆ ಮತ್ತು ಪರಿಶ್ರಮಕ್ಕೆ ಜನತೆಯ ಬೆಂಬಲ ದೊರೆಯದಿರುವುದು ವಿಷಾದನೀಯ.
ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕ ಬುಡಮೇಲು: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 40 ರಿಂದ 55 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಹೊಂದಿತ್ತು. ಇದಕ್ಕಾಗಿ ಒಂದು ವರ್ಷ ಮುನ್ನವೇ ತಯಾರಿ ಆರಂಭಿಸಿದ್ದ ತೆನೆ ಪಕ್ಷ ಜನತಾ ಜಲಧಾರೆ, ಪಂಚರತ್ನ ಯೋಜನೆಗಳ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಥಯಾತ್ರೆ ನಡೆಸಿದ್ದರು. ಕಾಂಗ್ರೆಸ್, ಬಿಜೆಪಿಯಿಂದ ವಲಸೆ ಬಂದವರಿಗೆ ಟಿಕೆಟ್ ನೀಡಿತ್ತು. ಆದರೆ ಪಕ್ಷದ ಭದ್ರಕೋಟೆಯಾಗಿದ್ದ ಹಳೇ ಮೈಸೂರು ಭಾಗದ ಮಂಡ್ಯ, ಹಾಸನ, ರಾಮನಗರ, ತುಮಕೂರು, ಕೋಲಾರ ಜಿಲ್ಲೆಗಳಲ್ಲೇ ಭಾರಿ ಹಿನ್ನಡೆ ಅನುಭವಿಸಿತು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸೋಲಿನ ನಂತರದ ರಾಜಕೀಯ ಪರಿಸ್ಥಿತಿ ಚರ್ಚಿಸಿದ ಎನ್‌ಸಿಪಿ..