ಬೆಂಗಳೂರು: ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುವ ಬದಲು 10 ನೆರೆ ಪೀಡಿತ ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಿ ಎಂದು ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ಇಂದು ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆರೆ ಪೀಡಿತ ಗ್ರಾಮಗಳ ದತ್ತು ಪಡೆದು ಕಾಂಗ್ರೆಸ್ಸಿಗರು ಸಕಾರಾತ್ಮಕ ನಿಲುವು ತಳೆಯಲಿ. ಅದನ್ನು ಬಿಟ್ಟು ಕೇಂದ್ರದಿಂದ ಇನ್ನೂ ನೆರೆ ಪರಿಹಾರ ಬಂದಿಲ್ಲವೆಂದು ಪ್ರತಿಭಟನೆ ಮಾಡುವುದು ನಕಾರಾತ್ಮಕ ನಿಲುವಾಗಿದೆ ಎಂದು ಕಿಡಿಕಾರಿದ್ರು.
ನಮ್ಮ ಪ್ರಧಾನಿಯವರಿಗೆ ಸಣ್ಣತನವಿಲ್ಲ. ಪ್ರಧಾನಿ ಪರಿಹಾರವನ್ನು ಬಿಜೆಪಿಯ ಒಂದೂ ಸಂಸದರಿಲ್ಲದ ಕೇರಳಕ್ಕೂ, ತಮಿಳುನಾಡಿಗೂ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆಯೆಂದು ಯಾಕೆ ಭಾವಿಸಬೇಕು ಎಂದು ಸಿ. ಟಿ. ಪ್ರಶ್ನಿಸಿದರು. ಅಲ್ಲದೆ, ಪ್ರಧಾನಿ ದೃಷ್ಟಿಯಲ್ಲಿ ಸಂತ್ರಸ್ತರೆಲ್ಲರೂ ಸಮಾನರೆಂದು ಸ್ಪಷ್ಟಪಡಿಸಿದರು. ಯಾವುದೇ ರಾಜ್ಯ ಸಂಕಷ್ಟಕ್ಕೊಳಗಾದರೆ, ನಿಗದಿತ ಪಾಲಿನ ಅನುದಾನ ಕೊಟ್ಟೇ ಕೊಡುತ್ತೇವೆ ಅಂತ ಕೇಂದ್ರ ಸರ್ಕಾರ ಹೇಳಿದೆ. ರಾಜಕೀಯ ಕಾರಣಕ್ಕಾಗಿ ಅದರಲ್ಲಿ ಹೆಚ್ಚು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿದರು.
ನಮ್ಮ ಅಧಿಕಾರಿಗಳು ದೆಹಲಿಗೆ ಹೋಗಿದ್ದಾರೆ, ಶೀಘ್ರದಲ್ಲೇ ಪರಿಹಾರದ ಹಣ ಬಿಡುಗಡೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ, ಪಕ್ಷಪಾತ ಮಾಡುವುದಿಲ್ಲ. ಮನೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ತಲಾ ಒಂದು ಲಕ್ಷ ವಿತರಿಸಲಾಗುತ್ತಿದೆ. ಉಳಿದ ಐದು ಲಕ್ಷವೂ ಬಿಡುಗಡೆ ಆಗುತ್ತದೆ ಎಂದು ಸಚಿವರ ಸಿ. ಟಿ. ಭರವಸೆ ನೀಡಿದ್ರು.
ಇನ್ನು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಇಡಿ ನೊಟೀಸ್ ಜಾರಿ ಮಾಡಿರುವುದಕ್ಕೆ ಸಚಿವ ಸಿ.ಟಿ ರವಿ ಮಾರ್ಮಿಕ ಉತ್ತರ ನೀಡುತ್ತಾ, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂದರು.