ದೊಡ್ಡಬಳ್ಳಾಪುರ: ಚಿರತೆಯೊಂದು ಮುಳ್ಳು ತಂತಿ ಬೇಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಣಿವೆಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗ್ರಾಮದ ಹೊರ ವಲಯ ಬ್ರಹ್ಮಗಿರಿ ಬೆಟ್ಟದ ಬಳಿ ಇರುವ ಸಿಲ್ಕ್ ಫ್ಯಾಕ್ಟರಿಯ ಮುಳ್ಳಿನ ತಂತಿ ಬೇಲಿಗೆ ಸಿಲುಕಿ ಚಿರತೆ ಪ್ರಾಣ ಬಿಟ್ಟಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಚಿರತೆ ಶವವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಸದ್ಯ ಚಿರತೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮುಳ್ಳಿನ ತಂತಿ ಬೇಲಿ ಹಾರುವ ವೇಳೆ ಬೇಲಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಸಂಶಯವಿದೆ. ಚಿರತೆ ಸುದ್ದಿ ಕೇಳುತ್ತಿದ್ದಂತೆ ನಂದಿ ಗಿರಿಧಾಮದ ಸುತ್ತ-ಮುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.