ಬೆಳಗಾವಿ/ಬೆಂಗಳೂರು: ಮರೆಗುದ್ದಿ ಏತ ನೀರಾವರಿ ಯೋಜನೆಗೆ 2018-19ನೇ ಸಾಲಿನ ಬಜೆಟ್ ಭಾಷಣದಲ್ಲಿ 100 ಕೋಟಿ ರೂ. ಘೋಷಿಸಲಾಗಿತ್ತು. ಆದರೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿಲ್ಲ. ಮುಂದಿನ ಸಭೆಯಲ್ಲಿ ಚರ್ಚಿಸಿ, ಅನುಮೋದನೆ ತೆಗೆದುಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಮರೆಗುದ್ದಿ ಸಿಸಿ ಪಾಟೀಲ್ ಬೀಗರೂರು: ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಆನಂದ್ ಸಿದ್ದು ನ್ಯಾಮಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಈ ವಿಚಾರವಾಗಿ ಪ್ರತಿ ನಿತ್ಯ ನನ್ನನ್ನು ಬೆನ್ನತ್ತಿದ್ದಾರೆ. ಅವರ ಸೊಸೆ ಮರೆಗುದ್ದಿಯಲ್ಲಿದ್ದು, ಅವರ ಬೀಗರೂರಿಗೆ ಯೋಜನೆ ಮಾಡಬೇಕೆಂದು ಹೇಳುತ್ತಿದ್ದಾರೆ. ಆದ್ದರಿಂದ ಮುಂದಿನ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ತಪ್ಪು ಮಾಹಿತಿ ನೀಡಿಲ್ಲ..: ಇನ್ನು, ತಪ್ಪು ಉತ್ತರ ನೀಡಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲ ಉತ್ತರವನ್ನು ಸರಿಯಾಗಿ ನೀಡಿದ್ದೇವೆ. ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಸರ್ಕಾರದ ಕಚೇರಿಯ ದಾಖಲೆಗಳನ್ನು ನೋಡಿಯೇ ಉತ್ತರ ನೀಡಿದ್ದೇವೆ. ಕೊಂಗ್ಣಿ ನೀರಾವರಿ ಯೋಜನೆಯನ್ನು ಒಂದು ತಿಂಗಳೊಳಗೆ ಮುಗಿಸಿ, ನಿಮ್ಮನ್ನು ಕರೆದು ಉದ್ಘಾಟನೆ ಮಾಡಿಸುತ್ತೇನೆ. ಮಾಣಿಕೇಶ್ವರ ಮತ್ತು ಹಾರ್ನಳ್ಳಿ ಯೋಜನೆ ಪ್ರಗತಿಯಲ್ಲಿದೆ. ಅದರ ಕಾರ್ಯವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಮಾಹಿತಿ ನೀಡಿದರು.
ಮೇಕರ್ ಮತ್ತು ಬಸವಕಲ್ಯಾಣ ಏತ ನೀರಾವರಿ ಯೋಜನೆಯಡಿ 1.5 ಟಿಎಂಸಿ ನೀರನ್ನು ಬಳಸಲು ಈಗಾಗಲೇ ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ಅದಕ್ಕೆ ತಕ್ಷಣ ಆಡಳಿತಾತ್ಮಕ ಅನುಮೋದನೆ ನೀಡಿ, ಕೆಲಸ ಪ್ರಾರಂಭಿಸಲು ಸೂಚನೆ ನೀಡುತ್ತೇನೆ ಎಂದರು. ಇನ್ನು, ಅವರ ಕ್ಷೇತ್ರದ 4 ಬ್ಯಾರೇಜ್‌ಗಳಿಗೆ ನೀರು ಹೋಗುತ್ತಿಲ್ಲ ಎಂದು ಖಂಡ್ರೆ ಹೇಳಿದ್ದಾರೆ. ಅದರ ಬಗ್ಗೆ ನಮ್ಮ ಅಧಿಕಾರಿಗಳ ಜತೆಗೆ ಸಭೆ ನಡೆಸಿ ನೀರು ಹೋಗುವಂತೆ ಮಾಡುತ್ತೇವೆ ಎಂದು ತಿಳಿಸಿದರು.
ಗೋದಾವರಿ ಬೇಸಿನ್‌ನ ನೀರು ಬಳಕೆ: ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಗೋದಾವರಿ ಬೇಸಿನ್‌ನಲ್ಲಿ ನಮ್ಮ ಪಾಲಿನ 22.37 ಟಿಎಂಸಿ ನೀರನ್ನು ನಾವು ಬಳಕೆ ಮಾಡಿಕೊಳ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ನಾವು ನೀರನ್ನು ಬಳಸಿಕೊಳ್ಳುತ್ತಿದ್ದೇವೆ. ವಿವಿಧ ಯೋಜನೆಗಳಿಗೂ ಅನುಮೋದನೆ ನೀಡಿದ್ದೇವೆ. ಕೆಲವು ಯೋಜನೆಗಳು ಪೂರ್ಣಗೊಂಡಿವೆ, ಕೆಲವು ಯೋಜನೆಗಳು ಪ್ರಗತಿಯಲ್ಲಿವೆ. ಖಂಡಿತವಾಗಿಯೂ ಗೋದಾವರಿ ಬೇಸಿನ್‌ನಲ್ಲಿ ಬಂದಿದ್ದ ನೀರನ್ನು ಬಳಸಿಕೊಳ್ತೀವಿ ಎಂದು ಹೇಳಿದರು.
ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರು ಕೆರೆ ತುಂಬಿಸುವ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಾಣಾವರ ಕೆರೆ ಸೇರಿ 7 ಕೆರೆಗಳನ್ನು ಕೆರೆ ತುಂಬುವ ಯೋಜನೆಗೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದರು. ಇನ್ನು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಕಿತ್ತೂರು ಶಾಸಕ ದೊಡ್ಡನಗೌಡರ್ ಮಹಾಂತೇಶ್ ಬಸವಂತರಾಯ್ ಅವರ ಪ್ರಶ್ನೆಗಳಿಗೆ ಇದೇ ವೇಳೆ ಉತ್ತರಿಸಿ ಅವರು ಪ್ರಸ್ತಾಪಿಸಿದ ವಿಚಾರಗಳನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡುತ್ತೇವೆ: ಸಿಎಂ ಭರವಸೆ