ಬೆಂಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಅವರಿಂದು ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೋದವರಿಗೆ ಬಿಜೆಪಿ ಬಾಗಿಲು ಬಂದ್ ಆಗಿರುತ್ತದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸವದಿ, "ನನ್ನ ಹೆಣವೂ ಸಹ ಬಿಜೆಪಿ ಆಫೀಸ್ ಕಡೆ ಹೋಗೋದು ಬೇಡ ಅಂತೇನೆ. ಸತ್ತಮೇಲೆ ನನ್ನ ಹೆಣವನ್ನು ಬಿಜೆಪಿ ಕಚೇರಿ ಮುಂಭಾಗ ತೆಗೆದುಕೊಂಡು ಹೋಗದಂತೆ ಮನೆಯವರಿಗೂ ಹೇಳ್ತೇನೆ" ಎಂದರು.
"ನನ್ನ ರಾಜೀನಾಮೆ ಅಂಗೀಕಾರವಾಗಿದೆ. ಇನ್ನು ನನಗೂ ಬಿಜೆಪಿಗೂ ಸಂಬಂಧ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ಪ್ರಯತ್ನಪಟ್ಟೆ. ಒಂದು ಪಕ್ಷದಲ್ಲಿ ಇದ್ದಾಗ ನಿಷ್ಠೆಯಿಂದ ಕೆಲಸ ಮಾಡಬೇಕಾಗುತ್ತದೆ. ಆಗ ಮಾಡಿದ್ದೆ" ಎಂದು ಹೇಳಿದರು.
ಬಿ.ಎಲ್.ಸಂತೋಷ್ ಬಗ್ಗೆ ಗೌರವವಿದೆ: "ಬಿ.ಎಲ್.ಸಂತೋಷ್ ಬಗ್ಗೆ ನನಗೆ ಗೌರವವಿದೆ. ಅವರಿಗೆ ಮುಜುಗರ ಮಾಡುವ ಮನಸ್ಸು ನನಗಿಲ್ಲ. ಸಾಕಷ್ಟು ಬಾರಿ ಕರೆ ಮಾಡಿದ್ದರು. ನಾನು ಅವರ ಮೇಲಿನ ಗೌರವಕ್ಕಾಗಿ ಕರೆ ಸ್ವೀಕಾರ ಮಾಡಿಲ್ಲ. ನನಗೆ 2023ರಲ್ಲಿ ಅಥಣಿ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಲಾಗುತ್ತೆ ಎಂದಿದ್ದರು. ಕೊಟ್ಟ ಮಾತು ತಪ್ಪಿದ್ದಾರೆ" ಎಂದರು.
"ನನಗೆ ಹೇಳದೇ ಡಿಸಿಎಂ ಪದವಿ ಕಿತ್ತುಕೊಂಡರು. ನಾನೇನು ಭ್ರಷ್ಟಾಚಾರ ಮಾಡಿರಲಿಲ್ಲ. ಹೇಳದೆ ಉಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾಕೆ?. ನಾನು ಏನಾದ್ರೂ ಕಳ್ಳತನ ಮಾಡಿದ್ನಾ?. ನಾನೇನಾದ್ರೂ ಮೋಸ ಮಾಡಿದ್ನೂ?" ಎಂದು ಸವದಿ ಕಿಡಿಕಾರಿದರು.
"ಯಾವ ಪಕ್ಷದಲ್ಲಿ ಇರ್ತೀವೋ ಆ ಪಕ್ಷಕ್ಕೆ ಕೆಲಸ ಮಾಡ್ತೀವಿ. ಇನ್ನೂ ಸಾಕಷ್ಟು ಜನ ಕಾಂಗ್ರೆಸ್ಗೆ ಬರೋರಿದ್ದಾರೆ. ಯಾರೆಲ್ಲ ಹಾಲಿ ಶಾಸಕರು ಸೇರ್ಪಡೆ ಆಗಬಹುದು ಎಂಬ ಪ್ರಶ್ನೆಗೆ, ಕಾದುನೋಡಿ ಎಂದು ತಿಳಿಸಿದರು. ಯಾರ ಬಗ್ಗೆ ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. 100% ಅಥಣಿಯಿಂದ ಸ್ಪರ್ಧೆ ಮಾಡ್ತೇನೆ ಎಂದರು.
"ನಾನು ಸತೀಶ್ ಜಾರಕಿಹೊಳಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಜೊತೆ ನೇರವಾಗಿಯೂ ಹೋಗಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು. ಪಕ್ಷ ಉನ್ನತ ಸ್ಥಾನಮಾನ ಕೊಡ್ತಾ ಇತ್ತೇನೋ ಎಂಬ ಪ್ರಶ್ನೆಗೆ, "ಪ್ರಧಾನಿ ಹುದ್ದೆ ಕೊಡ್ತಾ ಇದ್ರೋ ಏನೋ?. ಅದೊಂದೇ ಬಾಕಿ ಇರೋದು" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕಮಲ ತೊರೆದು ಕೈ ಹಿಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ