ಬೆಂಗಳೂರು: ಬೀದರ್‌ನ ದಸರಾ ಮೆರವಣಿಗೆ ಸಂದರ್ಭದಲ್ಲಿ ಶಮಿ ವೃಕ್ಷ ಪೂಜೆಗೆ ಹೆಚ್ಚು ಜನರು ಹೋಗಿದ್ದ ವಿಡಿಯೋ ಹರಿಬಿಡಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೀದರ್ ನಲ್ಲಿ ಅದೊಂದು ಸ್ಮಾರಕ, ಮಸೀದಿ ಇದೆ. ಅಲ್ಲಿ ಶಮಿ ವೃಕ್ಷ ಇತ್ತು, ಬಹಳ ವರ್ಷದಿಂದ ಪೂಜೆ ಮಾಡ್ತಾ ಇದ್ದರು. ದಸರಾ ಮೆರವಣಿಗೆಗೆ ಹೋಗುವಾಗ ಐದಾರು ಜನ ಮಾತ್ರ ಈ ಹಿಂದೆ ಹೋಗ್ತಾ ಇದ್ದರು. ಆದರೆ, ಈ ವರ್ಷ 25ಕ್ಕೂ ಹೆಚ್ಚು ಜನರು ಹೋಗಿದ್ದಾರೆ. ಅದನ್ನೇ ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದಾರೆ ಅಷ್ಟೇ. ಅನಧಿಕೃತವಾಗಿ ನುಗ್ಗಿಲ್ಲ, ದಾಳಿ ಅಂತದ್ದು ಏನೂ ಇಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಎಫ್ಐಆರ್ ಹಾಕಿದ್ದಾರೆ ಎಂದರು.
ಪ್ರಕರಣ ಮತ್ತೆ ತನಿಖೆ ಆಗಲಿದೆ: ಪಿಎಫ್ಐ ಕಾರ್ಯಕರ್ತರ ಬಂಧನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಪಿಎಫ್ಐ ಟ್ರೈನಿಂಗ್ ಕೊಡ್ತಿದ್ದ ಜಾಗದ ಮಾಹಿತಿ ಸಿಕ್ಕಿದೆ. ಸುಳ್ಯ ತಾಲೂಕಿನಲ್ಲಿ ಜಾಗ ಸಿಕ್ಕಿದೆ. ಕೆಲ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ವರದಿ ವಿಚಾರದಲ್ಲಿ ವರದಿಗೆ ಅಪೀಲ್ ಹೋಗುವುದಾಗಿ ಮೇಸ್ತಾ ತಂದೆ ಹೇಳಿದ್ದಾರೆ. ಮಗನನ್ನ ಕೊಂದು ತಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. ಆ ಪ್ರಕರಣ ಮತ್ತೆ ತನಿಖೆ ಆಗಲಿದೆ ಎಂದು ಹೇಳಿದರು.
ಸೆಲ್ಯುಲಾರ್ ಜೈಲ್ ನಿರ್ಮಾಣ ಮಾಡಿದ್ದಾರೆ: ಸಾವರ್ಕರ್ ಅವರ ನೆನಪಿಗಾಗಿ ಈ ಜಾಗದಲ್ಲಿ ಸೆಲ್ಯುಲಾರ್ ಜೈಲ್ ನಿರ್ಮಾಣ ಮಾಡಿದ್ದಾರೆ. ಸಾವರ್ಕರ್ ಜೈಲಿನಲ್ಲಿ ಹೇಗಿದ್ರು ಅನ್ನೋದನ್ನ ಕಾರ್ಯಕರ್ತರು ಇಲ್ಲಿ ಮಾದರಿ ನಿರ್ಮಾಣ ಮಾಡಿ ತೋರಿಸಿದ್ದಾರೆ. ಸೆಲ್ಯುಲಾರ್ ಜೈಲ್ ಅನ್ನ ಒಮ್ಮೆ ಎಲ್ಲರೂ ನೋಡಿ. ಆ ಜಾಗ ನೋಡಿದರೆ ಕರಳು ಹಿಚಕುತ್ತೆ.
ಅವರ ತ್ಯಾಗ ಬಲಿದಾನದಿಂದ ಇಂದು ನಾವು ಸ್ವಾತಂತ್ರ್ಯವಾಗಿದ್ದೇವೆ. ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡೋದು ಸರಿಯಲ್ಲ. ಮುಸ್ಲಿಂ ಕಾಲೋನಿಯಲ್ಲಿ ಫೋಟೋ ಯಾಕೆ ಹಾಕಿದಿರಿ ಅನ್ನೋದು ಅಪಚಾರ, ಮಾನಸಿಕ ವಿರೋಧಿತನ. ಇಂತ ಸ್ವಾತಂತ್ರ್ಯ ಹೋರಾಟಗಾರನನ್ನ ಗೌರವಿಸಬೇಕು ಎಂದು ಹೇಳಿದರು.
ಓದಿ: ಬೀದರ್ ಮದರಸಾಗೆ ನುಗ್ಗಿ ಪೂಜೆ ನೆರವೇರಿಸಿದ ಆರೋಪ : 9 ಮಂದಿ ವಿರುದ್ಧ ಪ್ರಕರಣ