ಬೆಂಗಳೂರು: ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ಅವರ ಮನೆ ಬಳಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಹಲವು ಗಣ್ಯರು ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಡಿ ಕೆ ಸುರೇಶ್ ಮುಂತಾದ ಗಣ್ಯರು ಪ್ರಾಂಜಲ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ರಾಜ್ಯ ಸರ್ಕಾರದಿಂದ ಗೌರವ ರಕ್ಷಣೆ ಸಮರ್ಪಣೆ ಹಾಗೂ ಸೈನಿಕ ಗೌರವ ರಕ್ಷಣೆ ಸಮರ್ಪಿಸಲಾಯಿತು.
ನ. 22 ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರು ಹಾಗೂ ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರು ಹುತಾತ್ಮರಾಗಿದ್ದರು. ಶುಕ್ರವಾರ ರಾತ್ರಿ ಪಾರ್ಥಿವ ಶರೀರವನ್ನು ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಂತಿಮ ನಮನ ಸಲ್ಲಿಸಿದ್ದರು. ನಂತರ ಪಾರ್ಥೀವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು.
ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನ ಮೆರವಣಿಗೆಗೆ ಸಾರ್ವಜನಿಕರಿಂದ ಅಂತಿಮ ನಮನ ಸಲ್ಲಿಕೆ: ಕ್ಯಾಪ್ಟನ್ ಪ್ರಾಂಜಲ್ ಅಂತಿಮ ಯಾತ್ರೆಯ ಮೆರವಣಿಗೆಗೆ ಬುಕ್ಕಸಾಗರ, ಕಲ್ಲುಬಾಳು, ಕಲ್ಲುಬಾಳು ಕ್ರಾಸ್, ಜಿಗಣಿ ಹೊರ ವರ್ತುಲ ರಸ್ತೆಯ ಒಐಟಿಎಸ್ ವೃತ್ತ, ರಿಂಗ್ ರಸ್ತೆ ಅಂತ್ಯ, ಹರಪ್ಪನಹಳ್ಳಿ ವೃತ್ತ, ಕೊಪ್ಪ ಗೇಟ್, ಬೇಗಿಹಳ್ಳಿ ಗೇಟ್, ಮಂಟಪ ಗೇಟ್, ರಾಗಿಹಳ್ಳಿ ಗೇಟ್, ಜಂಗಲಪಾಳ್ಯ, ಬನ್ನೇರುಘಟ್ಟ, ವೀವರ್ಸ್ ಕಾಲನಿ ಗೇಟ್ ಅನೇಕ ಕಡೆ ಶಾಲಾ ಮಕ್ಕಳು ಪುಷ್ಪ ಗುಚ್ಛಗಳು ಹಾಗೂ ಭಾರತ ಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಪ್ರಾಂಜಲ್ ಭಾವಚಿತ್ರ ಹಿಡಿದು ನಮನಗಳನ್ನು ಸಲ್ಲಿಸಿದರು. ಈ ನಡುವೆ ಬೈಕ್ ರ‍್ಯಾಲಿ, ಸೈನಿಕ ಪಡೆಯ ಗಸ್ತು, ಪುಷ್ಪಾರ್ಚನೆಯ ಮೂಲಕ ವೀರ ಯೋಧನಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದೀಗ ಬನ್ನೇರುಘಟ್ಟ ತಲುಪಿರುವ ಯೋಧನ ಅಂತಿಮ ಯಾತ್ರೆ, ನಂತರ ಬಸವನ ಪುರ, ನೈಸ್ ರಸ್ತೆಯ ಮೂಲಕ ಹೊಸೂರು-ಬೆಂಗಳೂರು ಹೆದ್ದಾರಿ ಮೂಲಕ ಕೂಡ್ಲು ಗೇಟ್ ನಂತರ ಕೂಡ್ಲು ವಿದ್ಯುತ್ ಚಿತಾಗಾತರಕ್ಕೆ ತಲುಪಲಿದೆ. ಅಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಸೈನಿಕ ಗೌರವ ವಂದನೆ ನೀಡಿ ಗನ್ ಫೈರ್ ಸೆಲ್ಯೂಟ್ ನಡೆಸಿ ದ್ವಜ ಹಸ್ತಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ