ಬೆಂಗಳೂರು: ದೇಣಿಗೆ ಸಂಗ್ರಹಿಸುವ ಸೋಗಿನಲ್ಲಿ ಪಿಜಿ, ಅಪಾರ್ಟ್ ಮೆಂಟ್ ಗಳೆಗೆ ಬಂದು ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಮಾರುತಿನಗರದ ಕೋಲಿವ್ ಅಟಾಟ್ಲ ಪಿಜಿಯಲ್ಲಿ ನಡೆದಿದೆ.
ಎನ್ ಜಿಒ ಹೆಸರು ಹೇಳಿಕೊಂಡು ಅಪಾರ್ಟ್ ಮೆಂಟ್ಸ್, ಪಿಜಿಗಳನ್ನು ಟಾರ್ಗೆಟ್ ಮಾಡಿಕೊಂಡು ದೇಣಿಗೆ ಹೆಸರಿನಲ್ಲಿ ಕಳ್ಳತನ ಮಾಡುವ ಗ್ಯಾಂಗ್ ನಗರದಲ್ಲಿ ಹುಟ್ಟಿಕೊಂಡಿದೆ. ಪ್ರಮುಖವಾಗಿ ಮಹಿಳೆಯರೇ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವುದು ಆತಂಕಕಾರಿಯಾಗಿದೆ.
ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಇದೇ ತಿಂಗಳು 13 ರಂದು ಎಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದ ಕೋಲಿವ್ ಅಟಾಟ್ಲ ಪಿಜಿಗೆ ಕಳ್ಳಿಯೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ. ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಸಾಮಾನ್ಯ ಧಿರಿಸಿನಲ್ಲಿ ಬರುವ ಮಹಿಳೆಯು ಪಿಜಿ ಪ್ರವೇಶಿಸಿ ಎನ್ ಜಿಒ ವೊಂದರಿಂದ ಬಂದಿರುವೆ.
ಬಡಮಕ್ಕಳ ಸಹಾಯಕ್ಕಾಗಿ ಏನಾದರೂ ಸಹಾಯ ಮಾಡಿ ಎಂದು ಹೇಳಿದ್ದಾಳೆ. ಇದಾದ ನಂತರ ಪಿಜಿಯ ನಾಲ್ಕನೇ ಮಹಡಿಗೆ ಹೋಗಿ ರೂಮ್ವೊಂದರ ಕದ ತಟ್ಟಿದ್ದಾಳೆ. ಬಾಗಿಲು ಒಳಗಿನಿಂದ ಲಾಕ್ ಆಗಿರದ ಕಾರಣ ಡೋರ್ ತೆಗೆದು ಒಳಪ್ರವೇಶಿಸಿದ್ದಾಳೆ. ಕೊಠಡಿಯಲ್ಲಿ ವಾಸವಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ರಾಘವ್ ಎಂ.ನಾಯರ್ ರೂಮಿನಲ್ಲಿ ಇಲ್ಲದಿರುವುದನ್ನು ಕಂಡು ರೂಂ ಹಾಲ್ ನ ಟೇಬಲ್ ಮೇಲೆ ಇಟ್ಟಿದ್ದ ದುಬಾರಿ ಮೌಲ್ಯದ ಲ್ಯಾಪ್ ಟಾಪ್ ನೋಡಿ ಕೂಡಲೇ ಕಳ್ಳತನ ಮಾಡಿ ತಮ್ಮ ವೇಲ್ ನಲ್ಲಿ ಲ್ಯಾಪ್ ಟಾಪ್ ಬಚ್ಚಿಟ್ಟುಕೊಂಡು ಕಾಲ್ಕಿತ್ತಿದ್ದಾಳೆ.
ಕೆಲಸ ನಿಮಿತ್ತ ಹೊರಹೋಗಿದ್ದ ಟೆಕ್ಕಿ ರೂಮಿಗೆ ಬಂದು ನೋಡಿದಾಗ ಲ್ಯಾಪ್ ಲಾಟ್ ಸಿಗದಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.. ಕೂಡಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳಿಯ ಕೈಚಳಕ ಸೆರೆಯಾಗಿದೆ. ಇದೇ ರೀತಿಯಲ್ಲಿ ಸುತ್ತಮುತ್ತಲಿನ ಏರಿಯಾಗಳಲ್ಲಿ ಎನ್ ಜಿಒ ಸೋಗಿನಲ್ಲಿ ಮಹಿಳೆಯರು ಬಂದು ಹೋಗಿರುವುದು ಗೊತ್ತಾಗಿದೆ.. ಕೃತ್ಯ ಸಂಬಂಧ ಎಚ್ ಎಎಲ್ ಪೊಲೀಸ್ ಠಾಣೆಗೆ ರಾಘವ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.