ಬೆಂಗಳೂರು : ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರ ತಾಯಿ ಹಾಗೂ ಇತರರಿಗೆ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಮಂಜೂರು ಮಾಡಲು ಕೆ. ಜಯಪ್ರಕಾಶ್ ನೆರವು ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಸರ್ಕಾರಿ ಭೂಮಿ ಮಂಜೂರು ಮಾಡಲು ನೆರವು ನೀಡಿರುವ ಆರೋಪಕ್ಕೆ ಸಿಲುಕಿರುವ ಭೂ ದಾಖಲೆ ಇಲಾಖೆ ಜಂಟಿ ಕಾರ್ಯದರ್ಶಿಯಾಗಿದ್ದ ಕೆ. ಜಯಪ್ರಕಾಶ್ಗೆ ನಗರದ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸುವ ಭೀತಿಯಲ್ಲಿ ಜಯಪ್ರಕಾಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್ ಈ ಆದೇಶ ಮಾಡಿದ್ದಾರೆ.
ಎಸಿಬಿ ಒಂದೊಮ್ಮೆ ಅರ್ಜಿದಾರ ಅಧಿಕಾರಿಯನ್ನು ಬಂಧಿಸಿದರೆ 2 ಲಕ್ಷ ಮೌಲ್ಯದ ಬಾಂಡ್ ಮತ್ತು ಇತರ ಭದ್ರತೆ ಪಡೆದು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಇಪ್ಪತ್ತು ದಿನಗಳಲ್ಲಿ ಜಯಪ್ರಕಾಶ್ ತನಿಖಾಧಿಕಾರಿ ಎದುರು ಹಾಜರಾಗಬೇಕು. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಅಥವಾ ನಾಶಪಡಿಸಬಾರದು. ತನಿಖೆಗೆ ಅಗತ್ಯ ಸಹಕಾರ ನೀಡಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ದೇಶ ಬಿಟ್ಟು ಹೋಗುವಂತಿಲ್ಲ. ಷರತ್ತುಗಳನ್ನು ಪಾಲಿಸದಿದ್ದಲ್ಲಿ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಆರೋಪವೇನು?: ಬೆಂಗಳೂರಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿ ಸರ್ವೆ ನಂ.29ರಲ್ಲಿನ 78 ಎಕರೆ ಸರ್ಕಾರಿ ಭೂಮಿಯಲ್ಲಿ 8.3 ಎಕರೆ ಭೂಮಿಯನ್ನು 2016ರಲ್ಲಿ ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಮಾರುತಿ ರಾವ್ ಜಾಧವ್ ಅವರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ.
ಓದಿ: ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ: ಸದ್ಯದ ಹಣಕಾಸು ಪರಿಸ್ಥಿತಿ ಹೇಗಿದೆ?
ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಜಮೀನನ್ನು ಪಡೆದು, ನಂತರ ಮಾರಾಟ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿದಾರರೊಬ್ಬರ ಹೇಳಿಕೆ ಆಧರಿಸಿ ಎಸಿಬಿ ಅಧಿಕಾರಿಗಳುು 2016ರ ಆಗಸ್ಟ್ 23ರಂದು ದೂರು ದಾಖಲಿಸಿಕೊಂಡಿದ್ದರು.
ಈ ಕೃತ್ಯಕ್ಕೆ ನೆರವು ನೀಡಿದ ಹಾಗೂ ಪ್ರಕರಣದ ಐದನೇ ಆರೋಪಿಯಾಗಿರುವ ತಾರಾಬಾಯಿ ಅವರಿಗೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ ಆರೋಪಗಳ ಅಡಿ ಜಯಪ್ರಕಾಶ್ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಸಿ), 13(2) ಹಾಗೂ ಐಪಿಸಿ ಸೆಕ್ಷನ್ 34 ಮತ್ತು 120ಬಿ ಅಡಿ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ