ಬೆಂಗಳೂರು : ಜಯನಗರ ಮಹಿಳಾ ಸಮಾಜದ ವತಿಯಿಂದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ಅಷಾಢ ಶುಕ್ರವಾರದ ಶುಭ ದಿನದಂದು 3,000 ಮಹಿಳೆಯರಿಂದ ಲಲಿತಾ ಸಹಸ್ರನಾಮ ಕಾರ್ಯಕ್ರಮ ನೆರವೇರಿತು. ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ, ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಯನಗರದ ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ನಾಗರತ್ನ ರಾಮಮೂರ್ತಿ ವಿಶೇಷಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಇಡೀ ಮನುಕುಲವನ್ನು ಒಂದೇ ಕುಟುಂಬ ಎಂದು ಭಾವಿಸಿ ಜೀವಿಸುವ ಧರ್ಮವೆಂದರೆ ಅದು ಹಿಂದೂ ಧರ್ಮ. ಆದ್ದರಿಂದ ವಸುಧೈವ ಕುಟುಂಬ ಎಂದು ಕರೆಯುತ್ತೇವೆ. ಆದರೆ ಇಂದು ಹಿಂದೂ ಧರ್ಮ ರಕ್ಷಣೆಗೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಧರ್ಮ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಹೇಳಿದರು.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ರಾಜ್ಯದ ಮೊಟ್ಟ ಮೊದಲ ಸುಸಜ್ಜಿತ ನಗರ ಜಯನಗರ. ಮೈಸೂರು ರಾಜಸಂಸ್ಥಾನಕ್ಕೂ ಜಯನಗರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಪ್ರಜಾಪ್ರಭುತ್ವ ಆಡಳಿತ ಇದ್ದರೂ ನಾಡಿನ ಜನರ ಒಳಿತಿಗಾಗಿ ರಾಜಮನೆತನ ತನ್ನ ಸೇವೆ, ಹೋರಾಟ ಮಾಡಲಿದೆ. ಅಷಾಢ ಮಾಸದಲ್ಲಿ ಚಾಮುಂಡಿ ತಾಯಿಯ ಆನುಗ್ರಹ ಎಲ್ಲರಿಗೂ ಲಭಿಸಲಿ. ರಾಜ್ಯದಲ್ಲಿ ಸುಖ, ಶಾಂತಿ ನೆಮ್ಮದಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಡೊಡ್ಡದು. ತಾಯಿ, ತಂಗಿ, ಅಕ್ಕ ಮತ್ತು ಹೆಂಡತಿಯಾಗಿ ಹಾಗೂ ಮನೆಯ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಶ್ರಮಿಸುವವಳು. ಮನೆ, ಕುಟುಂಬ ಮತ್ತು ಸಂಬಂಧಿಕರು ಎಲ್ಲರ ಶ್ರೇಯಸ್ಸು ಒಯಸುವ ಹೆಣ್ಣು, ಎಲ್ಲರ ಒಳಿತಿಗಾಗಿ ಲಲಿತಾ ಸಹಸ್ರನಾಮ ಪೂಜೆ ಮಾಡುತ್ತಿರುವುದು ತುಂಬಾ ಸಂತೋಷ ಎಂದು ತಿಳಿಸಿದರು.
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಲೋಕ ಕಲ್ಯಾರ್ಥಕ್ಕಾಗಿ ಜಯನಗರ ಮಹಿಳಾ ಸಮಾಜದ ವತಿಯಿಂದ ಲಲಿತಾ ಸಹಸ್ರನಾಮ ಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆಷಾಢ ಮಾಸದ ಶುಕ್ರವಾರ ಲಲಿತಾ ಸಹಸ್ರನಾಮ ಪಠಣೆಯಿಂದ ಬಂದ ಸಂಕಷ್ಟಗಳು ದೂರವಾಗಿ, ಮುಂಬರುವ ಕಷ್ಟಗಳು ಬರದಂತೆ ತಡೆಯುವ ಶಕ್ತಿ ಇದೆ. ರಾಜ್ಯದಲ್ಲಿ ಮಳೆ, ಬೆಳೆ ರೋಗಗಳ ನಿವಾರಣೆ ಎಲ್ಲರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಲಭಿಸಲಿ ಎಂದು ಕಾರ್ಯಕ್ರಮ ಮಾಡಲಾಗುತ್ತಿದೆ. ರಾಗಿಗುಡ್ಡ ಆಂಜನೇಯ ದೇವಸ್ಥಾನ ಪೂಜಾ ಮಂಡಳಿ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಸಂಘಟನೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ವಿನಾಕಾರಣ ಆರೋಪ : ಕಾರ್ಯಕ್ರಮದ ನಂತರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವಾಲೋಚನೆ ಇಲ್ಲದೇ 10 ಕೆ.ಜಿ.ಅಕ್ಕಿ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿತ್ತು. ಈಗ ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಅರೋಪ ಮಾಡುತ್ತಿದೆ. ಎಲ್ಲ ಗ್ಯಾರಂಟಿ ಹಣ ಎಲ್ಲಿಂದ ತರುತ್ತೀರಾ ಎಂದರೆ ಕಾಂಗ್ರೆಸ್ ಪಕ್ಷದವರು ಮೌನವಹಿಸುತ್ತಾರೆ. ಕೇಂದ್ರ ಸರ್ಕಾರ ಈಗಾಗಲೇ 5ಕೆ.ಜಿ.ಅಕ್ಕಿ ಉಚಿತವಾಗಿ ನೀಡುತ್ತಿದೆ. ರಾಜ್ಯದ ಜನತೆಗೆ ನೀಡಿದ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಕುಟುಕಿದರು.
ಇದನ್ನೂ ಓದಿ : ಇಂದು ಆಷಾಢ ಶುಕ್ರವಾರ: ನಾಗಲಕ್ಷ್ಮಿಯಾಗಿ ಕಂಗೊಳಿಸಿದ ಚಾಮುಂಡೇಶ್ವರಿ.. ತಾಯಿ ಕಣ್ತುಂಬಿಕೊಳ್ಳಲು ಹರಿದು ಬಂದ ಭಕ್ತಸಾಗರ