ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಚಿವ ಮುನಿರತ್ನ ಅವರಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅವಮಾನಿಸಿದ್ದಾರೆ. ಸಚಿವರ ವಿರುದ್ಧ ಪೋಸ್ಟರ್ ರಾಜಕಾರಣ ನಡೆಸಿದ್ದಾರೆ. ಪೇ ಸಿಎಂ, ಕಿವಿಯಲ್ಲಿ ಹೂ ರೀತಿಯ ಅಭಿಯಾನದಂತೆ ಮುನಿರತ್ನ ವಿರುದ್ಧ ಈಗ 'ಕೆರೆಕಳ್ಳ ಮುನಿರತ್ನ' ಎಂಬ ಬರಹವಿರುವ ಬ್ಯಾನರ್ ಅಳವಡಿಸಿದ್ದಾರೆ.
ನಿನ್ನೆ ರಾತ್ರಿ ಕ್ಷೇತ್ರದಲ್ಲಿ ಮುನಿರತ್ನ ಏರ್ಪಡಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿ ಕೆರೆ ಬಳಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. 72 ಎಕರೆ ಕೆರೆ ಮುಚ್ಚಿ ಮೈದಾನ ಮಾಡಿ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದಾರೆ ಮುನಿರತ್ನ ಎಂದು ಆರೋಪಿಸಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಶುರು ಮಾಡುತ್ತಿದ್ದಂತೆ ಬ್ಯಾನರ್ ಅಳವಡಿಸಿದ್ದಾರೆ.
ಇದರಿಂದ ಮುಜುಗರಕ್ಕೊಳಗಾದ ಕಂದಾಯ ಸಚಿವ ಆರ್.ಅಶೋಕ್ ಸಭೆಯಿಂದ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಪೋಸ್ಟರ್ ಅಭಿಯಾನ ನಡೆಸಿದ ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಕ್ಷೇತ್ರ ವ್ಯಾಪ್ತಿಯಲ್ಲಿ ಪೆಯಿಂಟ್ ಮಾಡಿಸಿದ್ದ ಬಿಜೆಪಿ ಸರ್ಕಾರದ ಸಾಧನೆಯ ಪೋಸ್ಟರ್ ಮೇಲೆ 40 ಪರ್ಸಂಟ್ ಸರ್ಕಾರ ಎಂದು ಬರೆದಿದ್ದರು. ಇದಾದ ಬಳಿಕ ನಿನ್ನೆ ಕಿವಿ ಮೇಲೆ ಹೂವು ಪೋಸ್ಟರ್ ಅಳವಡಿಸಲಾಗಿತ್ತು. ಇದಕ್ಕೂ ಹಿಂದೆ ಸ್ವತಃ ಮುನಿರತ್ನ ವಿರುದ್ಧವೇ ಪೋಸ್ಟರ್ಗಳನ್ನು ಅಳವಡಿಸಿ ಲೇವಡಿ ಮಾಡಲಾಗಿತ್ತು.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಮುನಿರತ್ನ ಈ ಸಾರಿಯೂ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಮ್ಮೆ ಕುಸುಮಾ ಹನುಮಂತರಾಯಪ್ಪ ನಿಲ್ಲುವ ಸಾಧ್ಯತೆ ಹೆಚ್ಚಿದೆ. ಇದರಿಂದ ಈಗಿನಿಂದಲೇ ಮುನಿರತ್ನ ವಿರುದ್ಧ ಕಾಂಗ್ರೆಸ್ ಹೋರಾಟದ ತಂತ್ರಗಾರಿಕೆ ರೂಪಿಸುತ್ತಿದೆ.
ಇದನ್ನೂ ಓದಿ: ನಿತೀಶ್ ಕುಮಾರ್ ಬಣ್ಣ ಬದಲಾಯಿಸುವ ವ್ಯಕ್ತಿ: ಸಿಎಂ ಬೊಮ್ಮಾಯಿ