ಬೆಂಗಳೂರು: ಹುಳಿಮಾವು ಕೆರೆಯ ಕಟ್ಟೆ ಒಡೆದು, ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ವಿಚಾರಿಸಿದಾಗ, ಖಾಸಗಿಯವರ ಲಾಭಕ್ಕಾಗಿ ಕೆರೆ ಏರಿ ಒಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ, ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ದಾಖಲೆಗಳ ಪ್ರಕಾರ, ಹುಳಿಮಾವು ಕೆರೆ 140 ಎಕರೆ ವಿಸ್ತೀರ್ಣವಿದೆ. ಅದರಲ್ಲಿ ಹುಳಿಮಾವು ಸರ್ವೆ ನಂಬರ್ನಲ್ಲಿ 125 ಎಕರೆ ಹಾಗೂ ಕಮ್ಮನಹಳ್ಳಿ ಸರ್ವೆ ನಂಬರ್ನಲ್ಲಿ 15 ಎಕರೆ ಜಾಗವಿದೆ. ಹುಳಿಮಾವು ಸರ್ವೆ ನಂಬರ್ನಲ್ಲಿ 18 ಎಕರೆ ಬಿಡಿಎ ಜಾಗ ಹಾಗೂ ರಸ್ತೆಯ ಜಾಗವಿದ್ದು, ಉಳಿದ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಮ್ಮನಹಳ್ಳಿ ಸರ್ವೆ ನಂಬರ್ನಲ್ಲಿ 1 ಎಕರೆ 34 ಗುಂಟೆ ಜಾಗವು ಒತ್ತುವರಿಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ.
ಕೆರೆಯ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವತಿಯಿಂದ ಹುಳಿಮಾವು ಕೆರೆಯ ಪಕ್ಕದಲ್ಲಿರುವ ತೇಜಸ್ವಿನಿ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಯಾವುದೇ ಮಾಹಿತಿ ನೀಡದೇ ಏಕಾಏಕಿ ಮನೆ ಹಾಗೂ ಶೆಡ್ಗಳನ್ನು ತೆರವುಗೊಳಿಸ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ಮಾಡಿ ಜೀವನ ಸಾಗಿಸುವ ಜನರಿಲ್ಲಿದ್ದು, ಏಕಾಏಕಿ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಇಲ್ಲಿ ಮನೆ ಮಾಡ್ಕೊಂಡು ವಾಸಿಸುತ್ತಿರುವ ಮಂದಿ ಪ್ರಶ್ನಿಸುತ್ತಿದ್ದಾರೆ. ಹಸುಗಳಿಗೆ ಶೆಡ್ ಹಾಕಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ, ಬಡವರ ಮನೆಗಳನ್ನು ಮಾತ್ರ ಒಡೆದು ಶ್ರೀಮಂತರ ಮನೆಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ಸಂಜೆಯವರೆಗೆ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ರೂ ಅಧಿಕಾರಿಗಳು ಮನೆಗಳನ್ನು ಒಡೆದು ಹಾಕಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಕಮ್ಮನಹಳ್ಳಿ ಸರ್ವೇ ನಂಬರ್ನ ಒತ್ತುವರಿ ಜಾಗದಲ್ಲಿ ಒಂದೆರೆಡು ಮನೆಗಳನ್ನು ತೆರವುಗೊಳಿಸಲಾಯಿತು. ಬಳಿಕ ಉಳಿದ ಮನೆಗಳಿಗೆ ತೆರವುಗೊಳಿಸಲು ಮುಂದಾದಾಗ ಅಲ್ಲಿ ವಾಸವಾಗಿದ್ದವರು ಕೋರ್ಟ್‌ನಿಂದ ಸ್ಟೇಆರ್ಡರ್ ತೋರಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.