ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೃದಾಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಆಸ್ಪತ್ರೆಗಳ ಬೇಜವಾಬ್ದಾರಿತನ ಮತ್ತೆ ಧೃಡವಾಗಿದೆ. ಕೊರೊನಾ ಪಾಸಿಟಿವ್ ಇರುವ ಮಹಿಳೆಗೆ ಉಸಿರಾಟದ ತೊಂದರೆ ಇರುವ ಕಾರಣ ಸರಿಯಾಗಿ ಚಿಕಿತ್ಸೆಗೆ ಬೆಡ್ ಸಿಗದೇ ಮಹಿಳೆ ಸಾವನ್ನಪ್ಪಿದ್ದು , ಆಕೆಯ ಆರು ದಿನದ ಮಗು ಅನಾಥವಾಗಿದೆ.
ನಾಗರಬಾವಿ ನಿವಾಸಿ ಮಹಿಳೆಗೆ ಹೆರಿಗೆಯಾದ ನಂತರ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರು ಚಿಕಿತ್ಸೆಗಾಗಿ ತಡರಾತ್ರಿ ಬಿಜಿಎಸ್ ಕೆಂಗೆರಿ, ಎಂಎಸ್ ರಾಮಯ್ಯ, ಬೌರಿಂಗ್ ಆಸ್ಪತ್ರೆ, ಪೊರ್ಟಿಸ್ಟ್, ಸಪ್ತಗಿರಿ, ವಿಕ್ರಂ, ನಾರಾಯಣ ಹೃದಾಯಲಯ ಹೀಗೆ ಒಟ್ಟು 12 ಆಸ್ಪತ್ರೆಗಳನ್ನ ಸುತ್ತಿದ್ದರು. ಕರೆ ಮಾಡಿ ವಿಚಾರಿಸಿದರೆ ಅಧಿಕಾರಿಗಳ ಕಡೆಯಿಂದ ನೋ ರೆಸ್ಪಾನ್ಸ್.
ಹೀಗಾಗಿ ಕುಟುಂಬದವರು ಎಂಎಲ್ಎ ಸೌಮ್ಯ ರೆಡ್ಡಿಯವರೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬೆಡ್ ಬೆಕೆಂದು ಸೌಮ್ಯ ರೆಡ್ಡಿ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ಕೊನೆಗೆ ನಾರಾಯಣ ಆಸ್ಪತ್ರೆಯವರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ತಾಯಿ ಸಾವನ್ನಪ್ಪಿರುವ ಕಾರಣ 6 ದಿನದ ಮಗು ಅನಾಥವಾಗಿದೆ.
ಆಸ್ಪತ್ರೆಯ ಕರ್ಮಕಾಂಡ ಬಯಲು ಮಾಡಲು ರೆಡಿಯಾಗಿರುವ ಐಎಎಸ್ ಹಾಗೂ ಐಪಿಎಸ್ ತಂಡ 12 ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.