ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಹೆಡೆಮುರಿ ಕಟ್ಟಲು ನಮ್ಮ ಆರೋಗ್ಯ ಸಿಬ್ಬಂದಿ ಯೋಧರಂತೆ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆದರೆ, ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೋಡಿದರೆ ಆತಂಕ ಮೂಡಿಸುವಂತಿದೆ.
ಸಿಬ್ಬಂದಿ ಕೊರತೆ ಮಧ್ಯೆ ಕೊರೊನಾ ಹೋರಾಟ ಕೊರೊನಾ ವೈರಸ್ ನಿಯಂತ್ರಣಕ್ಕೆ ನಮ್ಮ ವೈದ್ಯರು ಹಗಲಿರುಳು ಪ್ರಾಣದ ಹಂಗು ತೊರೆದು ಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮಹಾಮಾರಿಯ ರೌದ್ರನರ್ತನಕ್ಕೆ ಅಂಕುಶ ಹಾಕುವಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಇದೀಗ ಸಿಬ್ಬಂದಿ ಕೊರತೆ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸಿಬ್ಬಂದಿ ಕೊರತೆಯ ಅಸಲಿ ಚಿತ್ರಣ ಹೀಗಿದೆ:ಸರ್ಕಾರದ ಅಂಕಿ-ಅಂಶದ ಪ್ರಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಒಟ್ಟು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ 74,699. ಈ ಪೈಕಿ ಭರ್ತಿಯಾಗಿರುವ ಹುದ್ದೆ ಕೇವಲ 38,708. ಇದರಲ್ಲಿ 5,671 ಅಧಿಕಾರಿ ವರ್ಗ, 33,037 ಸಿಬ್ಬಂದಿ ವರ್ಗ ಭರ್ತಿಯಾಗಿವೆ. ಆದರೆ ಈ ಪೈಕಿ ಬಹುತೇಕ ಅರ್ಧದಷ್ಟು ಹುದ್ದೆಗಳು ಖಾಲಿ ಇರುವುದು ಆಘಾತಕಾರಿ ಅಂಶವಾಗಿದೆ.
ಒಟ್ಟು ಖಾಲಿ ಹುದ್ದೆ 35,991
ಖಾಲಿ ಅಧಿಕಾರಿಗಳ ಹುದ್ದೆ 5,037
ಖಾಲಿ ಸಿಬ್ಬಂದಿ ವರ್ಗ ಹುದ್ದೆ 30,954
ತುರ್ತು ನೇಮಕಾತಿಗೆ ನಿರ್ಧಾರ: ಮಹಾಮಾರಿ ತಾರಕಕ್ಕೇರಿದ ಬಳಿಕ ಇದೀಗ ಸರ್ಕಾರ ಎದ್ದು ಬಿದ್ದು ತುರ್ತಾಗಿ ವೈದ್ಯ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ. ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ವೈದ್ಯರು ಹಾಗೂ ನರ್ಸ್ ಮತ್ತು ಇತರ ಸಿಬ್ಬಂದಿಯನ್ನು ಆರು ತಿಂಗಳಿಗೆ ತಾತ್ಕಾಲಿಕ ಆಧಾರದಲ್ಲಿ ನೇಮಕಾತಿ ಮಾಡಲು ಸೂಚನೆ ನೀಡಿದೆ. ಅದರಂತೆ ಸುಮಾರು 810 ಹುದ್ದೆಗಳಿಗೆ ತುರ್ತು ನೇಮಕಾತಿ ಮಾಡಲು ಸೂಚಿಸಿದೆ. ಇದರಲ್ಲಿ ಸುಮಾರು 180 ಮಂದಿ ವೈದ್ಯರನ್ನು ನೇಮಿಸುವಂತೆ ಹೇಳಿದೆ. ಅಗತ್ಯ ಸೇವೆಗಳ ಇತರ ಇಲಾಖೆಯಲ್ಲೂ ಇದೇ ಹಣೆಬರಹ: ಅಗತ್ಯ ಸೇವೆಗಳ ಪೈಕಿ ಸಾರಿಗೆ ಇಲಾಖೆಯಲ್ಲಿ ಒಟ್ಟು 2812 ಹುದ್ದೆ ಮಂಜೂರಾಗಿದೆ. ಆದರೆ ಭರ್ತಿಯಾಗಿರುವುದು ಕೇವಲ 1,390. ಖಾಲಿ ಇರುವ ಹುದ್ದೆ ಬರೋಬ್ಬರಿ 1422. ಆಹಾರ ಇಲಾಖೆಯಲ್ಲಿ ಒಟ್ಟು 3142 ಹುದ್ದೆ ಮಂಜೂರಾಗಿದೆ. ಆದರೆ, ಭರ್ತಿ ಹುದ್ದೆ ಕೇವಲ 1357, ಖಾಲಿ ಇರುವ ಹುದ್ದೆ ಬರೋಬ್ಬರಿ 1785. ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆ 25,797. ಆದರೆ ಇದರಲ್ಲಿ ಭರ್ತಿಯಾಗಿರುವ ಹುದ್ದೆ 15,475. ಖಾಲಿಯಾಗಿರುವ ಹುದ್ದೆ ಬರೋಬ್ಬರಿ 10,322.