ಬೆಂಗಳೂರು: ಈ ಬಾರಿಯ ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರ ಮಾರ್ಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಶನಿವಾರ ಕೂಡ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಪ್ರಚಾರದಲ್ಲಿ ಹಿರಿಯ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಸರ್ವಧರ್ಮೀಯ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ಸಾಥ್ ನೀಡುವ ಮೂಲಕ ವಿಶೇಷ ಗಮನ ಸೆಳೆದರು. ಪ್ರಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕುಸುಮ, ಪ್ರಚಾರಕ್ಕೆ ಬಂದ ಕಾರ್ಯಕರ್ತರ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
ನಾನು ಮತಯಾಚನೆಗಾಗಿ ಹೊರಡುತ್ತಿದ್ದಂತೆ ಜೊತೆಗೆ ಬಂದ ಬಂಧುಗಳಿವರು. 'ಒಂದೇ ಮನೆಯಲ್ಲಿ ಹುಟ್ಟದಿದ್ದರೆ ಏನಂತೆ? ನಮ್ಮ ಮನೆಯ ಮಗಳು ನೀನು', ಎಂದು ಹಿಂದೂ, ಮುಸ್ಲಿಂ ಎನ್ನುವ ಬೇಧ ಭಾವವಿಲ್ಲದೆ ನನ್ನ ಬೆನ್ನಿಗೆ ನಿಂತಿದ್ದಾರೆ. ಇವರಿಗೆ ನಾನು ಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ತಳ್ಳುಗಾಡಿ ವ್ಯಾಪಾರಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಭೇಟಿಯಾಗಿ ಮತಯಾಚನೆ ಮಾಡಿದ ಅವರು, ಅವರ ಕಷ್ಟಗಳನ್ನು ಆಲಿಸಿದ್ದಾರೆ. ಹಾಗೂ ಒಳ್ಳೆಯ ದಿನಗಳು ಬರುವ ಭರವಸೆ ತುಂಬಿದ್ದು, ಇದು ಭರವಸೆಯ ಬಂಧ ಎಂದು ಹೇಳಿದ್ದಾರೆ.
ಪ್ರಚಾರದ ವೇಳೆ ಅಜ್ಜಿಯೊಬ್ಬರ ಬಳಿ ತೆರಳಿದ ಸಂದರ್ಭದ ಕುರಿತು ಮಾಹಿತಿ ಹಂಚಿಕೊಂಡ ಅವರು, ನನ್ನ ಕೈ ಹಿಡಿದು, ಕಣ್ಣಲ್ಲಿ ಕಣ್ಣಿಟ್ಟ ಈ ಅಮ್ಮ, ಮೊಗೆ ಮೊಗೆದು ಕೊಟ್ಟ ಪ್ರೀತಿ, ನನ್ನ ಜೀವನದಲ್ಲಿ ಚಿರಕಾಲ ನೆನಪಿನಲ್ಲಿ ಉಳಿಯುವಂಥದ್ದು. ಮೊದಲ ಬಾರಿಗೆ ನೋಡಿದರೂ, ಎಂದೋ ಕಂಡಿದ್ದಂತೆ ವಾತ್ಸಲ್ಯ ತೋರುವ ಇವರೆಲ್ಲರ ಋಣ ದೊಡ್ಡದು. ಇಂಥ ಕ್ಷಣಗಳು, ನಾನು ರಾಜರಾಜೇಶ್ವರಿ ನಗರದ ಮಗಳೆಂಬ ಹೆಮ್ಮೆಯನ್ನು ಹೆಚ್ಚು ಮಾಡುತ್ತವೆ ಎಂದಿದ್ದಾರೆ.
ಇನ್ನು ಪ್ರಚಾರದ ವೇಳೆ ಮನೆ ಮನೆಗೆ ತೆರಳುವ ಸಂದರ್ಭ, ಅಲ್ಲಿನ ರಸ್ತೆಗಳ ದುಸ್ಥಿತಿಯನ್ನು ಕಂಡು ಕುಸುಮ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜರಾಜೇಶ್ವರಿ ನಗರದ ಈ ರಸ್ತೆಯಲ್ಲಿ ನಡೆದಾಡಬೇಕು ಎಂದರೆ ಕೈ ಕಾಲು ಗಟ್ಟಿಯಾಗಿದ್ದವರಿಗೂ ಆಸರೆ ಬೇಕು ಎನ್ನುವಂತಿದೆ. ಮಕ್ಕಳು, ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ ಎನ್ನುವುದೇ ನನಗೆ ಆತಂಕ ಹುಟ್ಟಿಸುತ್ತದೆ. ನನ್ನ ಗುರಿ ಇಂತಹ ಸಮಸ್ಯೆಗಳನ್ನು ನಿವಾರಿಸುವುದು ಎಂದು ಹೇಳಿಕೊಂಡಿದ್ದಾರೆ.