ಬೆಂಗಳೂರು: ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇದು ಸಮಸ್ತ ಕನ್ನಡಿಗರ ಹೋರಾಟಕ್ಕೆ ದೊರೆತ ಫಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ರಾಜಕೀಯಕ್ಕೆ ಅತೀತವಾಗಿ ರೈತರು, ಕನ್ನಡಪರ ಹೋರಾಟಗಾರರು, ಕಾರ್ಮಿಕರು ಸೇರಿ ಎಲ್ಲರೂ ನಡೆಸಿದ ಸಮಷ್ಠಿ ಹೋರಾಟಕ್ಕೆ ಸಂದ ಜಯವಿದು ಎಂದಿದ್ದಾರೆ.
ಜೆಡಿಎಸ್ ಪಕ್ಷ ಕನ್ನಡಿಗರ ಜತೆಗೂಡಿ ಹೋರಾಟ ನಡೆಸಿದೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಸಂಸತ್ತಿನ ಒಳಗೆ, ಹೊರಗೆ ದೊಡ್ಡ ಸಂಘರ್ಷವನ್ನೇ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಸದ್ಯಕ್ಕೆ ಜಲ ಆಯೋಗ ಒಪ್ಪಿಗೆ ನೀಡಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇದೆ. ಪರಿಸರ ಇಲಾಖೆಯ ಅನುಮತಿ ಇನ್ನೂ ಸಿಕ್ಕಿಲ್ಲ. ಇದೆಲ್ಲವನ್ನೂ ತ್ವರಿತವಾಗಿ ಮುಗಿಸಿಕೊಂಡು ಕಾಮಗಾರಿ ಆರಂಭ ಮಾಡಬೇಕಿದೆ. ರಾಜ್ಯ ಸರ್ಕಾರ ಇನ್ನು ತಡ ಮಾಡುವುದು ಬೇಡ ಎಂದು ಸಲಹೆ ಮಾಡಿದ್ದಾರೆ.
ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಸಿಕ್ತು ಅನುಮತಿ: ಹೀಗಿದೆ ಹೋರಾಟದ ಹಾದಿ..