ಬೆಂಗಳೂರು: ಮಂಡ್ಯ ಜಿಲ್ಲೆಯ 'ಆಧುನಿಕ ಭಗೀರಥ' ಎನಿಸಿಕೊಂಡಿರುವ ಕಾಮೇಗೌಡರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳಲ್ಲಿ 'ಜೀವಿತಾವಧಿಯವರೆಗೂ' ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗಿದೆ.
'ಕೆರೆಗಳ ಮನುಷ್ಯ' ಎಂದೇ ಪ್ರಖ್ಯಾತಿ ಪಡೆದಿರುವ ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಅನನ್ಯ ಪರಿಸರ ಕಾಳಜಿ ಮತ್ತು ಸಾಧನೆಯನ್ನು ಪ್ರಧಾನಮಂತ್ರಿಗಳು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು. ಈ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಕಾಮೇಗೌಡರ ಅಪರಿಮಿತ ಸಾಧನೆಗಾಗಿ 'ಉಚಿತ ಬಸ್ ಪಾಸ್' ನೀಡಲು ಆದೇಶಿಸಿದ್ದು, ಅದರಂತೆ ಇಂದು ಉಚಿತ ಬಸ್ ಪಾಸ್ ನೀಡಲಾಗಿದೆ.
ಕಾಮೇಗೌಡರ ಕೊಡುಗೆ ಅಪಾರ, ಅದ್ಭುತ ಹಾಗೂ ಅನುಕರಣೀಯವಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಗಳಲ್ಲಿ ಅವರ ಜೀವಿತಾವಧಿಯವರೆಗೆ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲು ಅನುಮತಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.